ಲೋಕಸಭಾ ಚುನಾವಣೆಗೆ ಕೌಂಟ್‍ಡೌನ್ ಶುರು – ದೋಸ್ತಿಗಳಲ್ಲಿ ಫೈನಲ್ ಆಗಿಲ್ಲ ಕದನ ವೀರರು..!

-ಮೈತ್ರಿಗೆ ನಾಲ್ಕು ಕ್ಷೇತ್ರಗಳು ಅಡ್ಡಿ.!

ಬೆಂಗಳೂರು: ದೋಸ್ತಿಗಳ ನಡುವೆ ಲೋಕಸಭಾ ಮೈತ್ರಿ ಮಾತುಕತೆಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಲೋಕಸಭಾ ಚುನಾವಣೆಗೆ ಕೆಲವೇ ದಿನಗಳಲ್ಲಿ ದಿನಾಂಕ ಘೋಷಣೆಯಾಗಲಿದೆ. ಆದರೂ ರಾಜ್ಯದಲ್ಲಿ ಆಡಳಿತರೂಡ ಕಾಂಗ್ರೆಸ್-ಜೆಡಿಎಸ್ ನಡುವೆ ಸೀಟು ಹಂಚಿಕೆಯಲ್ಲಿ ಒಮ್ಮತ ಮೂಡಿಲ್ಲ. 28 ಕ್ಷೇತ್ರಗಳ ಪೈಕಿ ಜೆಡಿಎಸ್ ನಾಯಕರು 12 ಸ್ಥಾನಗಳಿಗೆ ಪಟ್ಟು ಹಿಡಿಡಿದ್ದಾರೆ ಎನ್ನಲಾಗಿದೆ.

ಮೈತ್ರಿಯಾದರೆ ಲೋಕಸಭೆ ಚುನಾವಣೆಯಲ್ಲಿ 12 ಸ್ಥಾನ ಬೇಕು ಎಂಬ ಬೇಡಿಕೆ ಇಟ್ಟಿದ್ದ ಜೆಡಿಎಸ್ ಅಳೆದು ತೂಗಿ 8 ಸ್ಥಾನವನ್ನು ಪಡೆಯುವ ಸಾಧ್ಯತೆಯು ಇತ್ತು. ಆದರೆ ಜೆಡಿಎಸ್ ಕಣ್ಣಿಟ್ಟಿರುವ ನಾಲ್ಕು ಪ್ರಮುಖ ಕ್ಷೇತ್ರಗಳ ವಿಷಯದಲ್ಲೇ ಮೈತ್ರಿ ಮಾತುಕತೆಗೆ ಪ್ರಮುಖ ಅಡ್ಡಿಯಾಗಿದೆ.

* ಮೈಸೂರಿನಲ್ಲಿ ಸಿದ್ದರಾಮಯ್ಯ, ಮಂಡ್ಯದಲ್ಲಿ ಸುಮಲತಾ ಅಡ್ಡಿ.?
ಮೈಸೂರು ಕ್ಷೇತ್ರದ ಮೇಲೆ ಜೆಡಿಎಸ್ ಕಣ್ಣಿಟ್ಟಿದೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತ್ರ ಯಾವ ಕಾರಣಕ್ಕೂ ತಮ್ಮ ತವರು ಜಿಲ್ಲೆಯ ಕ್ಷೇತ್ರವನ್ನ ಬಿಟ್ಟು ಕೊಡಲು ಸಾಧ್ಯವಿಲ್ಲ ಅಂದಿದ್ದಾರಂತೆ. ಮಂಡ್ಯದ ವಿಷಯದಲ್ಲಿ ಜೆಡಿಎಸ್ ಯಾವ ಕಾರಣಕ್ಕು ರಾಜೀ ಮಾತೇ ಇಲ್ಲಾ ಎನ್ನುತ್ತಿದೆ. ಆದರೆ ಕಾಂಗ್ರೆಸ್ ಸುಮಲತಾ ವಿಷಯದಲ್ಲಿ ಸಾಫ್ಟ್ ಕಾರ್ನರ್ ಇಟ್ಟುಕೊಂಡಿದ್ದು, ಕೊನೆಯವರೆಗೂ ಕಾಂಗ್ರೆಸ್ಸಿನಿಂದ ಸುಮಲತಾ ಸ್ಪರ್ಧೆಗೆ ಅವಕಾಶ ಮಾಡಿಕೊಡುವ ಪ್ರಯತ್ನಕ್ಕೆ ಮುಂದಾಗಿದೆ.

* ಹಾಸನದಲ್ಲಿ ಪ್ರಜ್ವಲ್ ಸ್ಪರ್ಧೆಗೆ ಎ.ಮಂಜು ಅಡ್ಡಗಾಲು..!
ಇನ್ನು ಹಾಸನದಿಂದ ತಮ್ಮ ಮೊಮ್ಮಗ ಪ್ರಜ್ವಲ್ ಸ್ಪರ್ಧೆ ಮಾಡುತ್ತಾರೆ ಅಂತ ಸ್ವತಃ ದೇವೇಗೌಡರೆ ಘೋಷಿಸಿದ್ದಾರೆ. ಆದರೆ ಮಾಜಿ ಸಚಿವ ಎ.ಮಂಜು ಸೇರಿದಂತೆ ಕಾಂಗ್ರೆಸ್‍ನ ಎಲ್ಲಾ ಮುಖಂಡರು ದೇವೇಗೌಡರು ಸ್ಪರ್ಧೆ ಮಾಡಿದ್ದರೆ ಮಾತ್ರ ಮೈತ್ರಿ, ಇಲ್ಲದಿದ್ದರೆ ನಮ್ಮ ದಾರಿ ನಮಗೆ ಎಂದಿದ್ದು ಹಾಸನದ ಮೈತ್ರಿಗೆ ಅಡ್ಡಿಯಾಗಿದೆ.

* ಚಿಕ್ಕಬಳ್ಳಾಪುರದಲ್ಲಿ ಕ್ಷೇತ್ರ ಬಿಟ್ಟುಕೊಡಲು ಒಪ್ಪದ ಮೊಯ್ಲಿ
ಬೆಂಗಳೂರಿನ ಪಕ್ಕದಲ್ಲೇ ಇರುವ ಚಿಕ್ಕಬಳ್ಳಾಪುರ ಕ್ಷೇತ್ರ ಬಿಟ್ಟುಕೊಟ್ಟರೆ ಕ್ಷೇತ್ರ ಗೆಲ್ಲುವ ಆತ್ಮ ವಿಶ್ವಾಸ ಜೆಡಿಎಸ್ ನಾಯಕರದ್ದು. ಇದಕ್ಕೆ ಕಾಂಗ್ರೆಸ್ ನ ಹಾಲಿ ಸಂಸದ ವೀರಪ್ಪ ಮೊಯ್ಲಿ ಸುತರಾಂ ಒಪ್ಪುತ್ತಿಲ್ಲ. ಆದ್ದರಿಂದ ಕಾಂಗ್ರೆಸ್ ಸಂಸದರಿರುವ ಯಾವ ಕ್ಷೇತ್ರವನ್ನು ಬಿಟ್ಟು ಕೊಡುವುದು ಬೇಡ ಎಂದು ಇತರೆ ಸಂಸದರೊಂದಿಗೆ ಸೇರಿ ದೆಹಲಿಯಲ್ಲೇ ಲಾಭಿ ಮಾಡಿದ್ದಾರೆ.

ಜೆಡಿಎಸ್ ತಮ್ಮ ಕ್ಷೇತ್ರವನ್ನು ಕೇಳಬಹುದು ಎಂಬ ಆತಂಕದಲ್ಲಿರುವ ಸಂಸದರಾದ ತುಮಕೂರಿನ ಮುದ್ದೇಹನುಮೇಗೌಡ, ಕೋಲಾರದ ಮುನಿಯಪ್ಪ, ಮೊದಲಾದ ಸಂಸದರು ಸಹ ಹಾಲಿಗಳಿಗೆ ಟಿಕೆಟ್ ನೀಡಿ ಎಂದು ಪಟ್ಟು ಹಿಡಿದಿದ್ದಾರೆ. ಆದ್ದರಿಂದ ಈ ಪ್ರಮುಖ ನಾಲ್ಕು ಸಮಸ್ಯೆಗಳೇ ಜೆಡಿಎಸ್ ಕಾಂಗ್ರೆಸ್ ಮೈತ್ರಿಗೆ ಅಡ್ಡಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *