ಮಸೂದ್ ಅಜರ್ ಮೌಲಾನ ಅಲ್ಲ, ಅವನೊಬ್ಬ ಸೈತಾನ್: ಓವೈಸಿ

ಮುಂಬೈ: ಜೈಶ್-ಇ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಮೌಲಾನ ಅಲ್ಲ, ಅವನೊಬ್ಬ ಸೈತಾನ್. ಪಾಕಿಸ್ತಾನ ನೆನಪಿಟ್ಟುಕೊಳ್ಳಬೇಕಿದೆ. ಭಾರತದ ಪ್ರಜೆಗಳು ಒಂದೇ ಎಂದು ಆಲ್ ಇಂಡಿಯಾ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಮುಂಬೈನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಪುಲ್ವಾಮಾ ದಾಳಿಯ ಹೊಣೆಯನ್ನು ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಹೊತ್ತಿದೆ. ಈ ದಾಳಿಗೆ ರಾಜಕೀಯ, ಅಧಿಕಾರಿಗಳು ಹಾಗೂ ಗುಪ್ತಚರ ಇಲಾಖೆಯ ವಿಫಲತೆಯೇ ಕಾರಣ ಎಂದು ದೂರಿದರು.

ಪುಲ್ವಾಮಾ ದಾಳಿಗೆ ಪಾಕಿಸ್ತಾನವೇ ಹೊಣೆಯಾಗಬೇಕು. ನೆರೆಯ ದೇಶಗಳು ಭಾರತೀಯ ಮುಸ್ಲಿಮರ ಬಗ್ಗೆ ಯೋಚನೆ ಮಾಡುವುದು ಬೇಡ. ಪಾಕಿಸ್ತಾನ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರನ್ನು ನಿರ್ಲಕ್ಷಿಸಿಯೇ ನಾವು ಇಲ್ಲಿ ಉಳಿದಿದ್ದು ಎಂದು ಹೇಳಿದರು.

ಪುಲ್ವಾಮಾ ದಾಳಿಯಲ್ಲಿ 40 ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಬಹುದೊಡ್ಡ ವಿಫಲತೆ ಎಂದು ಕಿಡಿಕಾರಿದರು.

ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‍ಪಿಎಫ್ ಯೋಧರ ಮೇಲೆ ನಡೆದ ಭಯೋತ್ಪಾದಕರ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಅಸಾದುದ್ದೀನ್ ಓವೈಸಿ, ಪಾಕಿಸ್ತಾನ ಹಾಗೂ ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆ ವಿರುದ್ಧ ಹರಿಹಾಯ್ದರು.

ಮಹಾರಾಷ್ಟ್ರದ ಆಡಳಿತ ಪಕ್ಷ (ಬಿಜೆಪಿ) ಹಾಗೂ ವಿರೋಧ ಪಕ್ಷ (ಕಾಂಗ್ರೆಸ್) ಎರಡು ದೂಷಿಗಳೇ. ಈ ಎರಡು ಪಕ್ಷಗಳು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಮುಸ್ಲಿಮರು ಕಾಂಗ್ರೆಸ್‍ಗೆ ಬೆಂಬಲ ನೀಡಬಾರದು. ಏಕೆಂದರೆ ಅವರಿಂದ ನಮ್ಮ ಸಮುದಾಯಕ್ಕೆ ತೊಂದರೆಗಳು ಉಂಟಾಗುತ್ತಿವೆ ಎಂದು ಆರೋಪಿಸಿದರು.

ಮಹಾರಾಷ್ಟ್ರದಲ್ಲಿ ಭರೀಪ್ ಬಹುಜನ್ ಮಹಸಂಗ್ ಅಧ್ಯಕ್ಷ ಹಾಗೂ ದಲಿತ ನಾಯಕ ಪ್ರಕಾಶ್ ಅಂಬೇಡ್ಕರ್ ಹಾಗೂ (ಎಐಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮೈತ್ರಿ ಮಾಡಿಕೊಂಡಿದ್ದು, ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗೆ ಭಾರೀ ಸಿದ್ಧತೆ ನಡೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *