ಕುಮಾರಸ್ವಾಮಿ ಸ್ವಂತ ಬಲದಿಂದ ಸಿಎಂ ಆಗಲ್ಲ ಅಂದಿದ್ದೆ: ಸಿಎಂಗೆ ಸಿದ್ದರಾಮಯ್ಯ ಟಾಂಗ್

– ಬಾಗಲಕೋಟೆಯಲ್ಲಿ ಈ ಬಾರಿ ಕಾಂಗ್ರೆಸ್‍ಗೆ ಗೆಲುವು ಖಚಿತ
– 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ಗೆಲುವು

ಬಾಗಲಕೋಟೆ: ಎಚ್.ಡಿ.ಕುಮಾರಸ್ವಾಮಿ ಸ್ವಂತ ಬಲದಿಂದ ಮುಖ್ಯಮಂತ್ರಿಯಾಗುವುದಿಲ್ಲ ನಾನು ಹೇಳಿದ್ದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳುವ ಮೂಲಕ ಟಾಂಗ್ ಕೊಟ್ಟಿದ್ದಾರೆ.

ಬದಾಮಿಯಲ್ಲಿ ಮಾತನಾಡಿದ ಮಾಜಿ ಸಿಎಂ, ಲೋಕಸಭಾ ಚುನಾವಣೆ ಬಳಿಕ ಯಾವುದೇ ಕಾರಣಕ್ಕೂ ಬಿಜೆಪಿ ಸರ್ಕಾರ ದೇಶದಲ್ಲಿ ಉಳಿಯಲ್ಲ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗುವುದಿಲ್ಲ. ಕಳೆದ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದಿಲ್ಲವೆಂದು ಹೇಳಿದ್ದೆ. ನಾನು ಹೇಳಿದಂತೆ ಆಯಿತು ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಇದನ್ನು ಓದಿ: ಈಶ್ವರಪ್ಪ ಪೆದ್ದ, ಬಿಜೆಪಿಯಲ್ಲಿ ಗುಲಾಮಗಿರಿ ಇದೆ: ಸಿದ್ದರಾಮಯ್ಯ

ಈ ವೇಳೆ ಮಾಧ್ಯಮಗಳು ವಿಧಾನಸಭಾ ಚುನಾವಣೆಯ ವೇಳೆ ಕುಮಾರಸ್ವಾಮಿ ಸಿಎಂ ಆಗುವುದಿಲ್ಲವೆಂದು ನೀವೇ ಹೇಳಿದ್ದೀರಿ ಅಲ್ಲವೇ ಎಂದು ಪ್ರಶ್ನಿಸುತ್ತಿದ್ದಂತೆ, ಸ್ವಂತ ಬಲದಿಂದ ಆಗುವುದಿಲ್ಲವೆಂದು ಹೇಳಿದ್ದೆ ಎಂದು ಸಿದ್ದರಾಮಯ್ಯ ಹಾರಿಕೆಯ ಉತ್ತರ ನೀಡಿದರು.

ತಮಿಳುನಾಡು, ಕೇರಳ, ತೆಲಂಗಾಣ ಎಲ್ಲಿಯೂ ಬಿಜೆಪಿಗೆ ನೆಲೆ ಇಲ್ಲ. ಹೀಗಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕರ್ನಾಟಕದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಆದರೂ ಕರ್ನಾಟಕದಲ್ಲಿ 5 ಕಡೆ ಗೆಲ್ಲಬಹುದಷ್ಟೇ. ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮೂಲಕವೇ ಎದುರಿಸಲಾಗುತ್ತದೆ. ಹೀಗಾಗಿ ನಾವು ಕನಿಷ್ಠ 22ರಿಂದ 23 ಸೀಟು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಾಗಲಕೋಟೆ ಲೋಕಸಭಾ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ, ಈ ಕ್ಷೇತ್ರದಲ್ಲಿ ಬಹಳಷ್ಟು ಜನರು ಹಾಗೂ ಎಲ್ಲಾ ಜಾತಿ ಜನಾಂಗದವರು ಟಿಕೆಟ್ ಕೇಳುತ್ತಿದ್ದಾರೆ. ನಾವು ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇಟ್ಟವರು. ಹೀಗಾಗಿ ಈ ಕುರಿತು ಎಲ್ಲ ಮುಂಖಡರ ಜೊತೆ ಚರ್ಚೆ ಮಾಡಿ ಸೂಕ್ತ ಅಭ್ಯರ್ಥಿಯನ್ನು ಘೋಷಿಸಲಾಗುತ್ತದೆ. ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ವಿಶ್ವಾಸ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *