ಯೋಧ ಗುರು ಮನೆಗೆ ಹೋಗಿ ತಂದೆಯನ್ನು ನೆನೆದು ಹರಿಪ್ರಿಯಾ ಕಣ್ಣೀರು

ಮಂಡ್ಯ: ಹುತಾತ್ಮ ಗುರು ಅವರ ಮನೆಗೆ ರಾಜಕಾರಣಿಗಳು, ಅಧಿಕಾರಿಗಳು, ಸೇನೆ ಅವರು ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದಾರೆ. ಈಗ ‘ಬೆಲ್ ಬಾಟಮ್’ ಚಿತ್ರ ತಂಡ ಗುರು ಅವರ ಮನೆಗೆ ಹೋಗಿ ಸಹಾಯ ಧನ ನೀಡಿ ಅವರ ತಾಯಿ, ಪತ್ನಿಗೆ ಸಾಂತ್ವನ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ನಟಿ ಹರಿಪ್ರಿಯಾ, ಸಿನಿಮಾ ಮಾಡುವಾಗ ಗಡಿಯನ್ನು ನೋಡಿದ್ದೇನೆ. ನಮ್ಮನ್ನು ಕಾಯುವವರು ಅಗಲಿದಾಗ ನೋವಾಗುತ್ತದೆ. ನಾವು ಉಗ್ರರಿಗೆ ಉತ್ತರ ಕೊಡಬೇಕು. ಮತ್ತೆ ಈ ರೀತಿ ಆಗಬಾರದು. ಅವರ ಪತ್ನಿಯನ್ನು ನನ್ನಿಂದ ನೋಡಲು ಆಗುತ್ತಿಲ್ಲ. ಕಾಶ್ಮೀರ ಭಾಗದಲ್ಲಿ ಚಿತ್ರೀಕರಣಕ್ಕೆ ಹೋಗಿ ಬಂದಿದ್ದಕ್ಕೆ ನನ್ನ ತಾಯಿ ಭಯ ಪಟ್ಟಿದ್ದರು. ಇನ್ನೂ ದೇಶ ಕಾಯುವ ಯೋಧರ ತಾಯಿಯರ ಪರಿಸ್ಥಿತಿ ಏನು? ಎಂದು ಪ್ರಶ್ನೆ ಮಾಡಿ ಕಣ್ಣೀರು ಹಾಕಿದರು.

ಹುತಾತ್ಮ ಯೋಧ ಗುರು ಮನೆಯವರ ದುಃಖ ನೋಡಿ, ತಂದೆಯ ಸಾವನ್ನು ನೆನೆಪಿಸಿಕೊಂಡು ಹರಿಪ್ರಿಯಾ ಕಣ್ಣೀರು ಹಾಕಿದ್ದಾರೆ. ಒಂದು ಕುಟುಂಬದಲ್ಲಿ ಯಾರನ್ನೇ ಕಳೆದುಕೊಂಡರು ನೋವಾಗುತ್ತದೆ. ಆ ನೋವು ನಮ್ಮ ತಂದೆಯನ್ನು ಕಳೆದುಕೊಂಡಾಗ ನನಗೆ ಆಗಿದೆ. ಆದರೆ ಯೋಧ ಗುರು ಅವರ ಪತ್ನಿ, ತಾಯಿ ನೋಡಿದರೆ ತುಂಬಾ ನೋವಾಗುತ್ತದೆ. ಇಡೀ ಭಾರತ, ಇಂತಹ ಎಲ್ಲ ತಾಯಂದಿರಿಗೆ ಸಹಾಯ ಮಾಡಲು ನಾವಿದ್ದೇವೆ. ಅವರು ತಮ್ಮ ಮಕ್ಕಳನ್ನು ದೇಶ ಕಾಯಲು ಕಳುಹಿಸಿದ್ದಕ್ಕೆ ನಾವು ಇಷ್ಟು ಆರಾಮಾಗಿದ್ದೇವೆ. ಹೀಗಾಗಿ ಅವರಿಗೆಲ್ಲ ಒಂದು ಸೆಲ್ಯೂಟ್. ನಾವೆಲ್ಲ ಅವರ ಮಕ್ಕಳು ಎಂಬಂತೆ ಹುತಾತ್ಮ ಯೋಧನ ಕುಟುಂಬದ ಜೊತೆ ಇರಬೇಕು. ಆದರೂ ನಮ್ಮಿಂದ ಅವರ ಮಗನ ಸ್ಥಾನ ತುಂಬಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಧೈರ್ಯ ಇದ್ದಿದ್ದರೆ ಉಗ್ರರು ನೇರವಾಗಿ ಬಂದು ಹೊಡೆದಾಡಬೇಕಿತ್ತು. ಈ ರೀತಿ ಹೇಡಿಗಳಾಗಿ ಬಂದು ಕೊಲ್ಲುವುದು ಸರಿಯಲ್ಲ. ಇದಕ್ಕೆ ಆದಷ್ಟು ಬೇಗ ಉತ್ತರ ಕೊಟ್ಟರೆ ದೇಶ ಜನ ಖುಷಿಯಾಗುತ್ತಾರೆ. ದೇಶ ಸೇವೆಯಲ್ಲಿ ಮಕ್ಕಳನ್ನು ಕಳೆದುಕೊಂಡ ತಾಯಿಯರಿಗೆ ಖುಷಿ ಆಗುತ್ತದೆ. ಕೊನೆಯ ಪಕ್ಷ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅವರ ಆತ್ಮಕ್ಕೆ ಒಂದು ಸಮಾಧಾನ ಸಿಗುತ್ತದೆ. ನಮ್ಮ ದೇಶದ ಅನ್ನ ತಿಂದು, ನಮ್ಮ ನೆಲದಲ್ಲಿ ಇದ್ದುಕೊಂಡು, ಬೇರೆ ಅವರಿಗೆ ಸಹಾಯ ಮಾಡುತ್ತಾರೆ. ಅಂತಹವರು ಯಾಕಿಲ್ಲಿರಬೇಕು? ಇಲ್ಲಿ ಇರುವುದಕ್ಕೆ ಅವರು ಅರ್ಹರೇ ಅಲ್ಲ. ಮೊದಲು ಅವರನ್ನು ದೇಶದಿಂದ ಹೊರ ಹಾಕಬೇಕು ಎಂದು ಉಗ್ರರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ನಿರ್ದೆಶಕ ರಿಷಬ್ ಶೆಟ್ಟಿ, ನಟಿ ಹರಿಪ್ರಿಯಾ ಹಾಗೂ ನಿರ್ಮಾಪಕ ಸಂತೋಷ್ ಕುಮಾರ್ ಸೇರಿದಂತೆ ಸಿನಿಮಾದ ಕಲಾವಿದರು ಗುರು ಅವರ ಮನೆಗೆ ಹೋಗಿದ್ದರು. ಯೋಧ ಗುರು ಕುಟುಂಬಸ್ಥರಿಗೆ ಸಾಂತ್ವನ ಹೇಳಿ. ಬಳಿಕ ನಿರ್ಮಾಪಕ ಸಂತೋಷ್ ಕುಮಾರ್ 25 ಸಾವಿರ ರೂ. ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು 50 ಸಾವಿರ ರೂ. ಚೆಕ್ ವಿತರಿಸಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *