ಕೆಜಿಎಫ್ ಅಂಗಳದಲ್ಲಿ ಬಾಲಿವುಡ್ ಖಳನಾಯಕ

ಬೆಂಗಳೂರು: 2018 ಡಿಸೆಂಬರ್ 21ರಂದು ಬಿಡುಗಡೆಯಾಗಿದ್ದ ಕೆಜಿಎಫ್ ಸಿನಿಮಾ ಇಡೀ ಭಾರತವೇ ಗಾಂಧಿನಗರದತ್ತ ತಿರುಗಿ ನೋಡುವಂತೆ ಮಾಡಿತ್ತು. 250 ಕೋಟಿಗೂ ಅಧಿಕ ಹಣವನ್ನು ಗಲ್ಲಾ ಪೆಟ್ಟಿಗೆ ತುಂಬಿಸಿಕೊಂಡಿರುವ ಕೆಜಿಎಫ್ ತಂಡ ಚಾಪ್ಟರ್-2 ಚಿತ್ರೀಕರಣದಲ್ಲಿ ತೊಡಗಿಕೊಳ್ಳುತ್ತಿದೆ. ಚಿತ್ರದ ಕಥೆಗಾಗಿಯೇ ಪ್ರಶಾಂತ್ ನೀಲ್ ಪಾತ್ರಗಳನ್ನು ಸಿದ್ಧ ಮಾಡಿಕೊಂಡಿದ್ದರು.

ಇದೀಗ ಕೆಜಿಎಫ್ ಸಿನಿಮಾ ತಂಡಕ್ಕೆ ಬಾಲಿವುಡ್ ನಟರೊಬ್ಬರು ಎಂಟ್ರಿ ಕೊಡುವ ಸಾಧ್ಯತೆಗಳಿವೆ. ಬಾಲಿವುಡ್ ಮುನ್ನಾ ಭಾಯ್ ಸಂಜಯ್ ದತ್ ಕೆಜಿಎಫ್-2 ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಕೆಜಿಎಫ್ ಸಿನಿಮಾ ಶೂಟಿಂಗ್ ಆರಂಭಿಸಿದಾಗ ಯಶ್, ವಿಶೇಷ ಪಾತ್ರದಲ್ಲಿ ನಟಿಸುವಂತೆ ಸಂಜಯ್ ದತ್‍ಗೆ ಆಫರ್ ನೀಡಿದ್ದರಂತೆ. ಆದ್ರೆ ಡೇಟ್ ಸಮಸ್ಯೆಯಾಗಿದ್ದರಿಂದ ಮತ್ತು ಇದು ಕೇವಲ ಕನ್ನಡದಲ್ಲಿ ತೆರೆಕಾಣುತ್ತೆ ಎಂದು ಭಾವಿಸಿದ್ದ ಸಂಜಯ್ ಚಿತ್ರವನ್ನು ಒಪ್ಪಿಕೊಂಡಿರಲಿಲ್ಲ ಎಂದು ಹೇಳಲಾಗುತ್ತದೆ. ಇದೀಗ ಬಾಲಿವುಡ್ ನಲ್ಲಿ ಕೆಜಿಎಫ್ ಸಿಕ್ಕ ಮನ್ನಣೆ ನೋಡಿದ ಸಂಜು, ಚಾಪ್ಟರ್-2ರಲ್ಲಿ ನಟಿಸೋದು ಬಹುತೇಕ ಖಚಿತವಾಗಿದೆ.

ಕೆಜಿಎಫ್ 90ರ ದಶಕದ ಕಥೆಯನ್ನು ಒಳಗೊಂಡಿದ್ದು, ಎರಡನೇ ಭಾಗದಲ್ಲಿ ರಾಕಿಗೆ ಎದುರಾಗುವ ಹೊಸ ಖಳನಾಯಕನಾಗಿ ಸಂಜು ಕಾಣಿಸಿಕೊಳ್ತಾರೆ ಎಂದು ಹೇಳಲಾಗುತ್ತಿದೆ. ಚಿತ್ರದ ಪುರುಷ ಕಲಾವಿದರು 90ರ ದಶಕಕ್ಕನುಗುಣವಾಗಿ ಉದ್ದನೆಯ ಗಡ್ಡ ಬಿಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಂಜಯ್ ಗಡ್ಡಕ್ಕೆ ಕತ್ತರಿ ಹಾಕಿಲ್ಲ. ಹಾಗಾಗಿ ಚಿತ್ರದ ಪಾತ್ರಕ್ಕಾಗಿ ಅಣಿಯಾಗುತ್ತಿದ್ದಾರೆ ಎಂದು ಅವರ ಫೋಟೋಗಳು ಹೇಳುತ್ತಿವೆ.

ಕೆಜಿಎಫ್ ನಲ್ಲಿ ಮೊದಲ ಬಾರಿಗೆ ಯಶ್, ಗ್ಯಾಂಗ್‍ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಭೂಗತ ಲೋಕದ ಅಧಿಪತಿಯಾಗಬೇಕೆಂದು ಹೊರಟ ರಾಕಿ ದೊಡ್ಡ ಆನೆಯೊಂದನ್ನು ಹೊಡೆಯಲು ಮುಂಬೈನಿಂದ ಬೆಂಗಳೂರಿಗೆ ಬರುತ್ತಾನೆ. ಹೀಗೆ ಬೆಂಗಳೂರಿಗೆ ಬಂದ ರಾಕಿ, ಚಿನ್ನದ ಗಣಿಯ ಕೆಜಿಎಫ್ ತಲುಪುತ್ತಾನೆ. ಆನೆಯನ್ನು ಹೊಡೆಯಲು ಬಂದ ರಾಕಿ ಕೆಜಿಎಫ್ ತನ್ನದಾಗಿಸಿಕೊಳ್ಳುವತ್ತ ಮುಂದಾಗುತ್ತಾನೆ. ಇಲ್ಲಿ ಕಥೆಯು ಟ್ವಿಸ್ಟ್ ಪಡೆದು ಮುಂದೆ ಸಾಗುತ್ತಾ ಹೋಗುತ್ತದೆ. ಕೆಜಿಎಫ್ ತನ್ನದಾಗಿಸಿಕೊಂಡ ರಾಕಿಯ ಮುಂದಿನ ಗುರಿ ಏನು ಎಂಬುದನ್ನು ಚಾಪ್ಟರ್ -2 ಬರೋವರೆಗೂ ನಾವೆಲ್ಲ ಕಾಯಲೇಬೇಕಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *