ಮನಸಿದ್ದರೆ ಯಾವ ಕಾಯಿಲೆ ಬೇಕಾದ್ರೂ ಗೆಲ್ಲಬಹುದು: ಪರಿಕ್ಕರ್

ಪಣಜಿ: ಮನಸ್ಸಿದ್ದರೆ ಯಾವ ಕಾಯಿಲೆ ಬೇಕಾದರೂ ಗೆಲ್ಲಬಹುದು ಎಂದು ಗೋವಾ ಸಿಎಂ ಮನೋಹರ್ ಪರಿಕ್ಕರ್ ಹೇಳಿದ್ದಾರೆ.

ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಮನೋಹರ್ ಪರಿಕ್ಕರ್ ಅವರು ಮನಸ್ಸು ಒಂದಿದ್ದರೆ ಯಾವ ಕಾಯಿಲೆಯನ್ನು ಬೇಕಾದರೂ ಗೆಲ್ಲಬಹುದು ಎಂದು ಟ್ವೀಟ್ ಮಾಡಿದ್ದಾರೆ. ಕೆಲ ತಿಂಗಳಿನಿಂದ ಅನಾರೋಗ್ಯದಲ್ಲಿರುವ ಪರಿಕ್ಕರ್ ಜನವರಿ 31 ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಗೋವಾದ ಉಪ ಸ್ಪೀಕರ್ ಪ್ರತಿಕ್ರಿಯಿಸಿ, ಪರಿಕ್ಕರ್ ಅವರ ಆರೋಗ್ಯ ಉತ್ತಮವಾಗಿಲ್ಲ. ದೇವರ ಆಶೀರ್ವಾದದಿಂದ ಅವರು ಬದುಕಿದ್ದಾರೆ. ಅವರಿಗೆ ಏನಾದರೂ ಆದರೆ ಗೋವಾದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಲಿದೆ ಎಂದು ತಿಳಿಸಿದ್ದಾರೆ.

ಮೆದೋಜೀರಕ ಗ್ರಂಥಿ ಸಮಸ್ಯೆಯಿಂದ ಬಳಲುತ್ತಿರುವ ಪರಿಕ್ಕರ್ ಕೆಲ ವರ್ಷಗಳಿಂದ ಪಣಜಿ, ಮುಂಬೈ, ದೆಹಲಿ, ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಹಣಕಾಸು ಖಾತೆಯನ್ನು ನಿಭಾಯಿಸುತ್ತಿರುವ ಮನೋಹರ್ ಪರಿಕ್ಕರ್ ಅವರು ಕಳೆದ ವಾರ ಗೋವಾ ವಿಧಾನಸಭೆಗೆ ಮೂಗಿಗೆ ಪೈಪ್, ತಲೆಗೆ ಟೋಪಿ ಹಾಕಿಕೊಂಡು ಆಗಮಿಸಿದ್ದರು. ಬಳಿಕ ಮೆಲು ಧ್ವನಿಯಲ್ಲಿಯೇ ಬಜೆಟ್ ಮಂಡಿಸಿದರು. ಹೀಗಾಗಿ ವಿಧಾನಸಭೆಯ ಸದಸ್ಯರು ಶಾಂತವಾಗಿ ಬಜೆಟ್ ಭಾಷಣವನ್ನು ಆಲಿಸಿದ್ದರು.

ಪರಿಕ್ಕರ್ ಅವರು ತಮ್ಮ ಭಾಷಣದ ಮಧ್ಯದಲ್ಲಿ ಹಲವು ಬಾರಿ ಸಿಬ್ಬಂದಿಗೆ ಕೇಳಿ ನೀರು ಪಡೆದು ಬಜೆಟ್ ಮಂಡನೆಯನ್ನು ಪೂರ್ಣಗೊಳಿಸಿದರು. ಅನಾರೋಗ್ಯ ಪರಿಸ್ಥಿತಿಯಲ್ಲೂ ಬಜೆಟ್ ಮಂಡನೆ ಮೂಲಕ ಕರ್ತವ್ಯ ನಿರ್ವಹಿಸಿದ ಮನೋಹರ್ ಪರಿಕ್ಕರ್ ಅವರಿಗೆ ಪಕ್ಷಾತೀತವಾಗಿ ಅಭಿನಂದನೆ ಸಲ್ಲಿಸಿದ್ದರು.

ಗೋವಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಚೋಡನ್ಕರ್, ಮೊದಲು ಹುಷಾರಾಗಿ ಬನ್ನಿ, ಆಮೇಲೆ ಜೋಷ್ ಕುರಿತಾಗಿ ಮಾತನಾಡಿ ಎಂದು ಕಳೆದ ಸೋಮವಾರ ವ್ಯಂಗ್ಯವಾಡಿದ್ದರು. ಬಜೆಟ್ ಮಂಡನೆಗೂ ಮುನ್ನ ಮಹೋಹರ್ ಪರಿಕ್ಕರ್ ಅವರು, ನಾನು ಅತ್ಯಂತ ಜೋಷ್‍ನಿಂದಲೇ ಬಜೆಟ್ ಮಂಡಿಸುತ್ತಿದ್ದೇನೆ ಎಂದು ಹೇಳುವ ಮೂಲಕ ಗಿರೀಶ್ ಚೋಡನ್ಕರ್ ಅವರಿಗೆ ತಿರುಗೇಟು ನೀಡಿದ್ದರು. ನನ್ನ ಕೊನೆ ಉಸಿರು ಇರುವವರೆಗೂ ರಾಜ್ಯದ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಬಜೆಟ್ ಮಂಡನೆ ವೇಳೆ ಭಾವನಾತ್ಮಕವಾಗಿ ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *