ಮಲ್ಲಳ್ಳಿ ಜಲಪಾತದಲ್ಲಿ ಈಜಲು ಹೋಗಿ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿ ಸಾವು!

ಮಡಿಕೇರಿ: ಜಲಪಾತದ ಅಡಿ ಈಜಲು ಹೋಗಿ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಮೃತಪಟ್ಟ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನಲ್ಲಿ ನಡೆದಿದೆ.

ಮೈಸೂರು ಮೂಲದ ಸ್ಕಂದ(24) ಮೃತ ದುರ್ದೈವಿ. ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತದಲ್ಲಿ ಘಟನೆ ನಡೆದಿದೆ. ಮೃತ ದೇಹವನ್ನು ಪ್ರವಾಸಿ ಮಿತ್ರ ಸಿಬ್ಬಂದಿ ಪತ್ತೆ ಹಚ್ಚಿ ಜಲಪಾತದಿಂದ ಮೇಲೆ ತೆಗೆದುಕೊಂಡು ಬಂದಿದ್ದಾರೆ.

ಮೃತ ಯುವಕ ಸ್ಕಂದ ಬೆಂಗಳೂರಿನ ಆಕ್ಸೆಂಚರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ವೀಕೆಂಡ್ ಪ್ರವಾಸಕ್ಕಾಗಿ 11 ಮಂದಿ ಸಹೋದ್ಯೋಗಿಗಳ ಜೊತೆಗೆ ಇಂದು ಮಲ್ಲಳ್ಳಿ ಫಾಲ್ಸ್ ಗೆ ಬಂದಿದ್ದ. ಈ ವೇಳೆ ಜಲಪಾತದ ಅಡಿಯಲ್ಲಿ ನಿಂತಿದ್ದ ನೀರಿಗೆ ಇಳಿದು ಈಜಲು ಹೋದಾಗ ಅಲ್ಲಿಯೇ ಮುಳುಗಿ ಸಾವನ್ನಪ್ಪಿದ್ದಾನೆ. ಇದನ್ನು ಓದಿ: ಸೆಲ್ಫಿ ತಗೆದುಕೊಳ್ಳಲು ಹೋಗಿ ಮಲ್ಲಳ್ಳಿ ಜಲಪಾತಕ್ಕೆ ಬಿದ್ದು ಜೀವ ಕಳೆದುಕೊಂಡ!

ಫಾಲ್ಸ್ ಅಡಿಯಲ್ಲಿ ಪಾಚಿ ಬೆಳೆದಿದೆ. ಮುಂಜಾಗ್ರತಾ ಕ್ರಮವಾಗಿ ಯಾವುದೇ ಬೇಲಿ ಹಾಕಿಲ್ಲ. ಇದರಿಂದಾಗಿ ಪ್ರವಾಸಿಗರು ನೀರಿಗೆ ಇಳಿಯುತ್ತಿದ್ದಾರೆ. ಬೆಂಗಳೂರಿನ ಯುವಕರ ತಂಡ ಇಂದು ಫಾಲ್ಸ್ ಗೆ ಬಂದಿತ್ತು. ಜಲಪಾತದ ಅಡಿಯಲ್ಲಿರುವ ನೀರಿನಲ್ಲಿ ಯುವಕರು ಈಜುತ್ತಿದ್ದನ್ನು ನೋಡಿದ ಸ್ಕಂದ ಕೂಡ ನೀರಿಗೆ ಇಳಿದಿದ್ದ. ಈಜಲು ಬಾರದೆ ಗುಂಡಿಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ಸ್ಥಳೀಯ ನಿವಾಸಿ ತಿಳಿಸಿದ್ದಾರೆ.

ಜಲಪಾತದ ಅಡಿಯಲ್ಲಿ ಗುಂಡಿಗಳಿವೆ. ಅದರಲ್ಲಿ ಬಿದ್ದು ಈ ಹಿಂದೆ 20ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಹಾಗೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪ್ರವಾಸಿಗರಿಂದ ಹಣ ಪಡೆಯುತ್ತಾರೇ ಹೊರತು ಪಾರ್ಕಿಂಗ್ ವ್ಯವಸ್ಥೆ ಮಾಡಿಲ್ಲ ಎಂದು ದೂರಿದರು.

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತ ಯುವಕ ಸ್ಕಂದ ಜೊತೆಗೆ ಬಂದಿದ್ದ ಸಹೋದ್ಯೋಗಿಗಳಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ. ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *