ಶ್ರೀಗಳ ಪುಣ್ಯಾರಾಧನೆಯಲ್ಲಿ ನಿರ್ಲಕ್ಷ್ಯ- ಭಕ್ತಾದಿಗಳು ಕುಸಿದು ಬಿದ್ದರೂ ಸಹಾಯಕ್ಕೆ ಬಾರದ ಪಿಎಸ್‍ಐ

ತುಮಕೂರು: ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ದಿನ ಹಾಗೂ ಪುಣ್ಯಾರಾಧನೆ ದಿನವನ್ನು ಬಿಗಿ ಬಂದೋಬಸ್ತ್ ನೀಡಿ ಯಾವುದೇ ಸಮಸ್ಯೆ ಆಗದಂತೆ ಕಾರ್ಯನಿರ್ವಹಿಸಿದ ಪೊಲೀಸರಿಗೆ ಧನ್ಯವಾದ ಹೇಳಲೇಬೇಕು. ಆದರೆ ಇದಕ್ಕೆ ಅಪವಾದ ಎಂಬಂತೆ ಪುಣ್ಯಾರಾಧನೆಯ ದಿನ ಪಿಎಸ್‍ಐ ಬಂದೋಬಸ್ತ್ ಮಾಡೋದನ್ನು ಬಿಟ್ಟು ಪ್ರೋಬೆಷನರಿ ಮಹಿಳಾ ಡಿವೈಎಸ್‍ಪಿ ಜೊತೆ ಸುಧೀರ್ಘ ಸಂಭಾಷಣೆ ನಡೆಸಿ ನಿರ್ಲಕ್ಷ್ಯ ತೋರಿದ್ದ ವಿಡಿಯೋ ಈಗ ವೈರಲ್ ಆಗಿದೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಠಾಣಾ ಪಿಎಸ್ ನವೀನ್ ಕುಮಾರ್, ಪ್ರೋಬೇಷನರಿ ಮಹಿಳಾ ಡಿವೈಎಸ್‍ಪಿ ಜೊತೆ ನಿರಂತರ ಮಾತುಕತೆ ನಡೆಸುತ್ತಾ, ಮೊಬೈಲಿನಲ್ಲಿ ಕಾಲಹರಣ ಮಾಡಿ ಸಾರ್ವಜನಿಕರ ವಿರೋಧಕ್ಕೆ ತುತ್ತಾಗಿದ್ದಾರೆ. ಪಿಎಸ್‍ಐ ನವೀನ್‍ನನ್ನು ಶ್ರೀಗಳ ಗದ್ದುಗೆ ಮುಂದೆ ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿತ್ತು.

ಮಧ್ಯಾಹ್ನದ ವೇಳೆ ಬಿರುಬಿಸಿಲಿನಲ್ಲಿ ಭಕ್ತಾದಿಗಳ ಸಂಖ್ಯೆಯೂ ಹೆಚ್ಚಾಗಿತ್ತು. ಹಲವರು ತಲೆ ಸುತ್ತಿನಿಂದಾಗಿ ಕುಸಿದು ಬಿದ್ದಿದ್ದರು. ನೂಕಾಟ ತಳ್ಳಾಟ ಜೋರಾಗಿತ್ತು. ಇವೆಲ್ಲವೂ ಪಿಎಸ್‍ಐ ನವೀನ್ ಮುಂದೆ ನಡೆಯುತಿತ್ತು. ಇದ್ಯಾವುದರ ಪರಿವೇ ಇಲ್ಲದ ನವೀನ್ ಪ್ರೋಬೇಷನರಿ ಮಹಿಳಾ ಡಿವೈಎಸ್‍ಪಿ ಜೊತೆ ಸುಧೀರ್ಘ ಸಂಭಾಷಣೆಯಲ್ಲಿ ತೊಡಗಿಕೊಂಡಿದ್ದರು.

ನವೀನ್ ಕುಮಾರ್ ಎದುರಲ್ಲೇ ಹಲವು ಭಕ್ತಾದಿಗಳು ಕುಸಿದು ಬಿದಿದ್ದಾರೆ. ಅವರ ಸಹಾಯಕ್ಕೂ ನವೀನ್ ಹೋಗಲಿಲ್ಲ. ಅಷ್ಟೇ ಅಲ್ಲದೇ ಈ ಇಬ್ಬರೂ ಪೊಲೀಸ್ ಅಧಿಕಾರಿಗಳು ಒರಗಿಕೊಂಡಿದ್ದ ಬ್ಯಾರಿಕೇಡ್ ನ ಕ್ಯೂನಲ್ಲಿ ಜನರ ನೂಕಾಟ ತಳ್ಳಾಟ ಜೋರಾಗಿತ್ತು. ಸ್ವಲ್ಪ ಯಾಮಾರಿದರೂ ಕಾಲ್ತುಳಿತ ನಡೆಯುತಿತ್ತು.

ಈ ಸನ್ನಿವೇಶವನ್ನು ಕಂಡು ಕಾಣದಂತಿದ್ದ ನವೀನ್ ಸುದೀರ್ಘ ಮಾತುಕತೆಯಲ್ಲಿ ತೊಡಗಿದ್ದನು. ಮೊಬೈಲ್ ಫೋನಿನಲ್ಲಿ ಬ್ಯುಸಿಯಾಗಿದ್ದ. ಕರ್ತವ್ಯ ಮರೆತು ಬೇರೆಯದ್ದೇ ಲೋಕದಲ್ಲಿದ್ದ ಈ ಅಧಿಕಾರಿಗಳ ವಿಡಿಯೋ ಈಗ ವೈರಲ್ ಆಗಿದ್ದು, ಇವರಿಬ್ಬರ ನಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *