ಮಗ ಪ್ರೀತಿಸಿ ಓಡಿ ಹೋಗಿದ್ದಕ್ಕೆ ಅಪ್ಪ-ಅಮ್ಮನಿಗೆ ಚಿತ್ರಹಿಂಸೆ

ಮಂಡ್ಯ: ಮಗ ಪ್ರೀತಿಸಿ ಓಡಿ ಹೋಗಿದ್ದಕ್ಕೆ ಆತನ ತಂದೆ-ತಾಯಿಗೆ ಚಿತ್ರಹಿಂಸೆ ನೀಡುತ್ತಿದ್ದು, ರಕ್ಷಣೆಗಾಗಿ ಯುವಕನ ತಂದೆ-ತಾಯಿ ಮನವಿ ಮಾಡುತ್ತಿರುವ ಘಟನೆ ಮಂಡ್ಯದ ಹಾಲಹಳ್ಳಿ ಬಡಾವಣೆಯಲ್ಲಿ ನಡೆದಿದೆ.

ಕೃಷ್ಣೇಗೌಡ ಹಾಗೂ ವಸಂತ ದಂಪತಿಯ ಪುತ್ರ ನಿರಂಜನ್ ಗೌಡ ಹಾಲಹಳ್ಳಿ ಬಡಾವಣೆಯಲ್ಲೇ ವಾಸವಿದ್ದ ಚಾಂದುಶ್ರೀ ಎಂಬ ಯುವತಿಯನ್ನು ಪ್ರೀತಿಸಿದ್ದನು. ನಿರಂಜನ್‍ಗೌಡ ಎಂಬಿಎ ಮುಗಿಸಿದ್ದು, ಚಾಂದುಶ್ರೀ ಎಂಟೆಕ್ ವ್ಯಾಸಂಗ ಮಾಡಿದ್ದಾರೆ. ನಿರಂಜನ್ ಹಾಗೂ ಚಾಂದುಶ್ರೀ ಕಳೆದ 9 ವರ್ಷದಿಂದ ಪ್ರೀತಿಸುತ್ತಿದ್ದರು. ಚಾಂದುಶ್ರೀ ಸರ್ಕಾರಿ ವಕೀಲರೊಬ್ಬರ ಮಗಳಾಗಿದ್ದು, ಯುವ ಜೋಡಿಗಳಿಬ್ಬರು ಒಂದೇ ಜಾತಿಯವರಾಗಿದ್ದರೂ ಯುವತಿಯ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು.

ನಿರಂಜನ್ ಹಾಗೂ ಚಾಂದುಶ್ರೀ 9 ವರ್ಷದಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಬಳಿಕ ಜನವರಿ 21ರಂದು ಯುವಜೋಡಿಗಳಿಬ್ಬರು ನಾಪತ್ತೆಯಾಗಿದ್ದರು. ಜನವರಿ 24ರಂದು ಇಬ್ಬರು ಅಜ್ಞಾತ ಸ್ಥಳದಲ್ಲಿ ಮದುವೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿಯಬಿಟ್ಟಿದ್ದರು. ಆಗ ಚಾಂದುಶ್ರೀ ಕುಟುಂಬಸ್ಥರು ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ನಿರಂಜನ್ ಪೋಷಕರಿಗೆ ಮಾನಸಿಕ ಕಿರುಕುಳ ನೀಡಿದಲ್ಲದೇ ಮೊಬೈಲ್ ಒಡೆದು ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಪೊಲೀಸರು ವಿಚಾರಣೆ ನೆಪದಲ್ಲಿ ಕರೆದುಕೊಂಡು ಹೋಗಿ ರೌಡಿಗಳಿಗಳಿಂದ ಹಲ್ಲೆ ಮಾಡಿಸಿದ್ದಾರೆ ಎಂದು ನಿರಂಜನ್ ಪೋಷಕರು ಆರೋಪಿಸುತ್ತಿದ್ದಾರೆ. ಇದರಿಂದ ಮನನೊಂದ ದಂಪತಿ ಪೊಲೀಸರು ಮಾಡಿದ ಅವಮಾನಕ್ಕೆ ಒಂದು ವಾರ ಮನೆಗೆ ಹೋಗಿಲ್ಲ. ನಮ್ಮ ಕಷ್ಟ ಹೇಳಿಕೊಳ್ಳಲು ಎಸ್‍ಪಿ ಅವರ ಬಳಿ ಬಂದಿದ್ದೇವೆ. ಎಸ್‍ಪಿ ಆಫೀಸಲ್ಲೇ ಸತ್ತರೂ ಚಿಂತೆಯಿಲ್ಲ. ನಮಗೆ ಕಿರುಕುಳ ಮಾತ್ರ ಕೊಡಬೇಡಿ. ಜೀವ ಭಯ ಇದೆ, ರಕ್ಷಣೆ ಕೊಡಿ ಎಂದು ನಿರಂಜನ್ ಪೋಷಕರು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಪ್ರೀತಿಸಿ ಮದುವೆಯಾದವರು ಇಬ್ಬರು ವಯಸ್ಕರು. ನನ್ನ ಮಗನಿಗೂ ಓಡಿ ಹೋಗಿ ಮದುವೆ ಆಗಬೇಡ ಎಂದು ಹೇಳಿದ್ದೆ. ಆದರೆ ಅವರು ಓಡಿ ಹೋಗಿ ಮದುವೆಯಾದರೆ ನಾವೇನು ಮಾಡಲು ಸಾಧ್ಯ. ದಯವಿಟ್ಟು ನಮಗೆ ರಕ್ಷಣೆ ಕೊಡಿ ಎಂದು ನಿರಂಜನ್ ಪೋಷಕರು ಅಂಗಲಾಚುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *