ಮನೆಗೆ ಬಂದ ಮಗನಿಗೆ ಗೊತ್ತಾಯ್ತು ತಾಯಿಯ ರಹಸ್ಯ – ಕೊನೆಗೆ ಹೆತ್ತಕರುಳನ್ನ ಕೊಂದ ಪಾಪಿ

ನವದೆಹಲಿ: ಅಕ್ರಮ ಸಂಬಂಧವನ್ನು ವಿರೋಧಿಸಿದ್ದಕ್ಕೆ ಲಿವ್ ಇನ್ ರಿಲೆಷನ್‍ಶಿಪ್ ಹೊಂದಿದ್ದ ವ್ಯಕ್ತಿಯ ಜೊತೆ ಸೇರಿ ತಾಯಿಯೇ ಮಗನನ್ನೇ ಕೊಲೆ ಮಾಡಿರುವ ಘಟನೆ ಪೂರ್ವ ದೆಹಲಿಯ ಹೊಸ ಅಶೋಕ್ ನಗರದಲ್ಲಿ ನಡೆದಿದೆ.

ಈ ಘಟನೆ ಶನಿವಾರ ರಾತ್ರಿ ನಡೆದಿದ್ದು, ಮೃತನನ್ನು ರವೀಂದರ್ ಪಾಠಕ್ ಎಂದು ಗುರುತಿಸಲಾಗಿದೆ. ಮೃತ ಪಾಠಕ್ ಇತ್ತೀಚೆಗೆ ತಾಯಿಯೊಂದಿಗೆ ಉತ್ತರ ಪ್ರದೇಶದ ಬಸ್ತಿಯಲ್ಲಿ ವಾಸಿಸುತ್ತಿದ್ದನು. ಸದ್ಯಕ್ಕೆ ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?
ಮೃತ ಪಾಠಕ್ ತಮ್ಮ ತಾಯಿ ಮತ್ತು ಆಕೆಯ ಸ್ನೇಹಿತ ಅಜಿತ್ ಜೊತೆ ಬಾಡಿಗೆ ಫ್ಲಾಟ್ ನಲ್ಲಿ ವಾಸಿಸುತ್ತಿದ್ದನು. ಪಾಠಕ್ ನೋಯ್ಡಾದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಎಂದಿನಂತೆ ಪಾಠಕ್ ಶನಿವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಹಿಂದಿರುಗಿದ್ದಾನೆ. ಈ ವೇಳೆ ತಾಯಿ ಮತ್ತು ಅಜಿತ್ ಇಬ್ಬರು ಅನೈತಿಕ ಸಂಬಂಧ ಹೊಂದಿದ್ದನ್ನು ನೋಡಿದ್ದಾನೆ. ಇದರಿಂದ ಮೂವರ ಮಧ್ಯೆ ಜಗಳ ಶುರುವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಗಳ ವಿಕೋಪಕ್ಕೆ ತಿರುಗಿ ತಾಯಿ ಮತ್ತು ಸ್ನೇಹಿತ ಇಬ್ಬರು ಇಟ್ಟಿಗೆಯಿಂದ ಪಾಠಕ್ ತಲೆಗೆ ಹೊಡೆದಿದ್ದಾರೆ. ಪರಿಣಾಮ ಪಾಠಕ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ನಂತರ ಆರೋಪಿ ಅಜಿತ್ ಅಂಬುಲೆನ್ಸ್ ಗೆ ಕರೆ ಮಾಡಿದ್ದಾನೆ. ಸ್ಥಳಕ್ಕೆ ಅಂಬುಲೆನ್ಸ್ ಚಾಲಕ ಬಂದಿದ್ದು, ಪಾಠಕ್ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇತ್ತ ತಾಯಿ ಮಗನ ಅಂತ್ಯಕ್ರಿಯೆ ಮಾಡಲು ಮೃತ ದೇಹವನ್ನು ಆಜಾದ್ಪುರದಲ್ಲಿದ್ದ ಮಗಳ ಮನೆಗೆ ತೆಗೆದುಕೊಂಡು ಹೋಗಿದ್ದಾಳೆ. ಆದರೆ ಮಗಳು ಅನುಮಾನಗೊಂಡು ಮೃತದೇಹವನ್ನು ಹೊಸ ಅಶೋಕ್ ನಗರಕ್ಕೆ ತೆಗೆದುಕೊಂಡು ಹೋಗುವಂತೆ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ. ಬಳಿಕ ಮಹಿಳೆ ಮತ್ತೆ ಅಶೋಕ್ ನಗರಕ್ಕೆ ಮರಳಿದಾಗ ಆಕೆಯನ್ನು ಮತ್ತು ಆಕೆಯ ಸ್ನೇಹಿತ ಅಜಿತ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಸದ್ಯಕ್ಕೆ ಐಪಿಸಿ ಸೆಕ್ಷನ್‍ಗೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *