– ಕೃಷಿ ಸಾಲಮನ್ನಾ ಘೋಷಣೆ
ಗ್ಯಾಂಗ್ಟೋಕ್: ಸಿಕ್ಕಿಂ ರಾಜ್ಯದ ಮುಖ್ಯಮಂತ್ರಿ ಪವನ್ ಚಾಮ್ಲಿಂಗ್ ಶನಿವಾರ ಒಂದು ಕುಟುಂಬ, ಒಂದು ಉದ್ಯೋಗ (One Family, One Job) ಯೋಜನೆಯನ್ನು ಆರಂಭಿಸಿದ್ದಾರೆ. ಈ ಯೋಜನೆಯಿಂದಾಗಿ ಸಿಕ್ಕಿಂ ರಾಜ್ಯದ ಪ್ರತಿ ಕುಟುಂಬದ ಓರ್ವ ಸದಸ್ಯನಿಗೆ ರೋಜಗಾರ್ ಅಂದರೆ ದಿನಗೂಲಿ ಕೆಲಸ ಸಿಗಲಿದೆ. ಇದೇ ವೇಳೆ ಮಾತನಾಡಿದ ಸಿಎಂ, ತಮ್ಮ ರಾಜ್ಯದ ಎಲ್ಲರ ಕೃಷಿ ಸಾಲಮನ್ನಾ ಮಾಡಲಾಗುವುದು ಅಂತಾ ಹೇಳಿದ್ದಾರೆ.
ಸ್ವತಂತ್ರ ಭಾರತದ ದೀರ್ಘಾವದಿಯ ಸಿಎಂ ಎಂಬ ಕೀರ್ತಿಗೆ ಪಾತ್ರರಾಗಿರುವ ಪವನ್ ಚಾಮ್ಲಿಂಗ್ ಶನಿವಾರ ರೋಜಗಾರ್ ಮೇಳ-2019ರಲ್ಲಿ ಭಾಗಿಯಾಗಿದ್ದರು. ಈ ವೇಳೆ 32 ವಿಧಾನಸಭಾ ಕ್ಷೇತ್ರದ ತಲಾ ಇಬ್ಬರು ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ವಿತರಿಸಿದರು. ಮುಂದಿನ ದಿನಗಳಲ್ಲಿ ಆಯಾ ಜಿಲ್ಲಾಧಿಕಾರಿಗಳು ಸ್ಥಳೀಯವಾಗಿ ಋಣ ಮುಕ್ತ ಪ್ರಮಾಣ ಪತ್ರವನ್ನು ವಿತರಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.

ಸದ್ಯ 11,772 ರೈತರಿಗೆ ಋಣ ಮುಕ್ತ ಪ್ರಮಾಣ ಪತ್ರ ವಿತರಿಸಲಾಗಿದ್ದು, ಉಳಿದವನ್ನು ಅತಿ ಶೀಘ್ರದಲ್ಲಿಯೇ ವಿತರಿಸುತ್ತೇವೆ. ಒಂದು ಕುಟುಂಬ, ಒಂದು ಉದ್ಯೋಗ ಯೋಜನೆಯಿಂದಾಗಿ ಸುಮಾರು 20 ಸಾವಿರ ಯುವಕರಿಗೆ ಉದ್ಯೋಗ ಲಭಿಸಲಿದೆ. ಮುಂದಿನ ಐದು ವರ್ಷಗಳವರೆಗೆ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸಿದ ಬಳಿಕ ಸರ್ಕಾರಿ ನೌಕರರಾಗಲಿದ್ದಾರೆ. ರಾಜ್ಯದ ಯುವಕರಿಗೆ ಇದೊಂದು ಒಳ್ಳೆಯ ಯೋಜನೆಯಾಗಿದ್ದು, ಎಲ್ಲರು ಸದುಪಯೋಗ ಪಡಿಸಿಕೊಳ್ಳಬೇಕು. ಸರ್ಕಾರದ 12 ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಘೋಷಿಸುತ್ತಿದ್ದಂತೆ ಸ್ಥಳದಲ್ಲಿದ್ದ ಜನರು ‘ಪವನ್ ಚಾಮ್ಲಿಂಗ್ ಜಿಂದಾಬಾದ್’ ಎಂಬ ಘೋಷಣೆ ಕೂಗಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv

Leave a Reply