ರಾಜಕೀಯದಲ್ಲಿ ಕಣ್ಣು ಬಿಡುವ ಮುನ್ನವೇ ಐಟಿ ರೇಡ್ ಆಗಿತ್ತು : ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು: ನಾನು ಎರಡು ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ವೇಳೆ ನನ್ನ ಮೇಲೆ ಐಟಿ ರೇಡ್ ಆಗಿತ್ತು. ಅದು ಕೇವಲ ರಾಜಕೀಯ ಪ್ರೇರಿತ ದಾಳಿಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಂಗದ ಹೋರಾಟ ಮುಂದುವರಿಸುತ್ತೇನೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಅಧ್ಯಕ್ಷೆಯಾಗಿ ಇಂದು ನಗರದ ಶಾಂತಿನಗರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಪಕ್ಷದ ನಾಯಕರು ನನಗೆ ಜವಾಬ್ದಾರಿಯನ್ನು ನೀಡಿದ್ದು, ಸಿಎಂ ಕುಮಾರಸ್ವಾಮಿ ಸೇರಿದಂತೆ ಎಲ್ಲಾ ನಾಯಕರಿಗೂ ಕೃತಜ್ಞತೆ ತಿಳಿಸುತ್ತೇನೆ ಎಂದರು.

ಇದೇ ವೇಳೆ ಐಟಿ ದಾಳಿಗೆ ಸಂಬಂಧಿಸಿದಂತೆ ಬೇನಾಮಿ ಆಸ್ತಿ ಕುರಿತ ಪ್ರಶ್ನೆಗೆ ಉತ್ತರಿಸಿ, ನಾನು ಯಾವುದೇ ಬೇನಾಮಿ ಆಸ್ತಿ ಕೂಡ ಮಾಡಿಲ್ಲ. ಎರಡು ಬಾರಿ ಚುನಾವಣೆಯಲ್ಲಿ ಸೋತು ಸುಣ್ಣವಾಗಿ, ಇನ್ನೂ ಶಾಸಕಿಯಾಗಿ ಕಣ್ಣು ಬಿಟ್ಟಿರಲಿಲ್ಲ. ಆಗ ನನ್ನ ಮೇಲೆ ರಾಜಕೀಯವಾಗಿ ರೇಡ್ ಆಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದನ್ನು ವಕೀಲರು ಹಾಗೂ ನನ್ನ ಸಹೋದರ ನೋಡಿಕೊಳುತ್ತಾರೆ. ಉಳಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಸಚಿವ ಡಿಕೆ ಶಿವಕುಮಾರ್ ಹಾಗೂ ತಮ್ಮ ಯಾವುದೇ ಬೇನಾಮಿ ಆಸ್ತಿಯ ವಿಷಯವು ನನಗೆ ಗೊತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.

ಲೋಕಸಭೆಗೆ ಸ್ಪರ್ಧಿಸುವ ಆಸೆ ಇಲ್ಲ: ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪರ್ಧಿಸುತ್ತರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಅಂತಹ ಯಾವುದೇ ಆಸೆ ಇಲ್ಲ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನ ನನಗೆ ಉತ್ತಮ ಅವಕಾಶ ನೀಡಿದ್ದಾರೆ. ಈ ಕರ್ತವ್ಯವನ್ನು ನಿರ್ವಹಿಸುತ್ತೇನೆ ಅಷ್ಟೇ. ಹೈಕಮಾಂಡ್ ಯಾವುದೇ ಹಂತದಲ್ಲಿ ನಿರ್ಧಾರ ಕೈಗೊಂಡರೂ ನಾನು ಬದ್ಧನಾಗಿರುತ್ತೇನೆ ಎಂದರು.

ಬೆಳಗಾವಿ ರಾಜಕೀಯ ಅಸಮಾಧಾನವೂ ಸಣ್ಣ ಪ್ರಮಾಣದಲ್ಲಿ ಇದ್ದು, ಪಕ್ಷದ ಮುಖಂಡರು ಈ ಕುರಿತು ಸೂಕ್ತ ಕ್ರಮಕೈಗೊಳ್ಳುತ್ತಾರೆ. ಆದರೆ ಪಕ್ಷದ ವಿಚಾರಕ್ಕೆ ಬಂದಾಗ ನಾವೆಲ್ಲರು ಒಂದೇ. ಒಂದೇ ತಾಯಿ ಹೊಟ್ಟೆಯಲ್ಲಿ ಹುಟ್ಟಿದ ನಾಲ್ವರು ಮಕ್ಕಳಲ್ಲೇ ಹೊಂದಾಣಿಕೆ ಆಗುವುದಿಲ್ಲ. ಆದೇ ರೀತಿ ನಮ್ಮಲ್ಲೂ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಸಾಮಾನ್ಯ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *