ದೇವಸ್ಥಾನದಲ್ಲಿ ಮದ್ಯ ಹಂಚಿದ ಬಿಜೆಪಿ ನಾಯಕ!

ಲಕ್ನೋ: ಉತ್ತರ ಪ್ರದೇಶದ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ನರೇಶ್ ಅಗರ್ವಾಲ್ ಹಾಗೂ ಅವರ ಪುತ್ರ ದೇವಸ್ಥಾನದಲ್ಲಿ ಜನರಿಗೆ ಊಟದ ಜೊತೆ ಮದ್ಯ ಹಂಚಿ ವಿವಾಧದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ.

ಭಾನುವಾರದಂದು ಬಿಜೆಪಿ ನಾಯಕ ನರೇಶ್ ಅವರ ಪುತ್ರ ನಿತೀನ್, ಪಾಸಿ ಸಮುದಾಯದವರಿಗೆ ಸಮ್ಮೇಳನವನ್ನು ಹಾರ್ಡೊಯ್‍ನ ಶ್ರವಣ ದೇವಿ ದೇವಸ್ಥಾನದಲ್ಲಿ ಆಯೋಜಿಸಿದ್ದರು. ಈ ವೇಳೆ ಸಮ್ಮೇಳನಕ್ಕೆ ಬಂದ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು. ಪ್ರತಿಯೊಬ್ಬ ವ್ಯಕ್ತಿಗೂ ಊಟದ ಜೊತೆ 200 ಎಂಎಲ್ ಮದ್ಯದ ಬಾಟಲಿಯನ್ನು ಪ್ಯಾಕ್ ಮಾಡಿ ವಿತರಿಸಲಾಗಿತ್ತು. ಸಮ್ಮೇಳನಕ್ಕೆ ಬಂದಿದ್ದ ಮಕ್ಕಳಿಗೂ ಕೂಡ ಅದೇ ಊಟದ ಪ್ಯಾಕ್‍ಗಳನ್ನು ನೀಡಲಾಗಿತ್ತು. ಈ ವೇಳೆ ಸ್ಥಳಿಯರೊಬ್ಬರು ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ವಿರೋಧ ಪಕ್ಷದ ನಾಯಕರು ಹಾಗೂ ಜನರು ನರೇಶ್ ಅಗರ್ವಾಲ್ ಹಾಗೂ ಅವರ ಪುತ್ರನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬರುವ ಲೋಕಸಭೆ ಚುನಾವಣೆಯಲ್ಲಿ ಹಾರ್ಡೊಯ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನರೇಶ್ ಅಗರ್ವಾಲ್ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು, ಜನರ ಬೆಂಬಲ ಪಡೆಯಲು ಬಿಜೆಪಿ ನಾಯಕ ಈ ರೀತಿ ಮದ್ಯವನ್ನು ಹಂಚಿದ್ದಕ್ಕೆ ಭಾರೀ ಆಕ್ರೋಶ ಕೇಳಿ ಬಂದಿದೆ.

ಈ ವಿಡಿಯೋ ಎಲ್ಲೆಡೆ ಸದ್ದು ಮಾಡುತ್ತಿದ್ದಂತೆ ಕೆಲವು ಬಿಜೆಪಿ ನಾಯಕರು ಕೂಡ ನರೇಶ್ ಅಗರ್ವಾಲ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹಾರ್ಡೊಯ್ ಕ್ರೇತ್ರದಿಂದ ಗೆದ್ದ ಬಿಜೆಪಿ ಎಂಪಿ ಅಂಶುಲ್ ವರ್ಮಾ ಪ್ರತಿಕ್ರಿಯಿಸಿ, ಉನ್ನತ ಸ್ಥಾನದಲ್ಲಿರುವ ನಾಯಕನಾಗಿ ನರೇಶ್ ಅವರು ಈ ರೀತಿ ತಪ್ಪು ಕೆಲಸ ಮಾಡಿದ್ದಾರೆ. ಈ ಕುರಿತು ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚೆ ಮಾಡುತ್ತೇವೆ. ಇತ್ತಿಚಿಗಷ್ಟೆ ನರೇಶ್ ಅವರು ಬಿಜೆಪಿಗೆ ಸೇರಿದ್ದರು. ಈಗ ಈ ರೀತಿ ಕೆಲಸ ಮಾಡಿ ಪಕ್ಷದ ಹೆಸರನ್ನು ಹಾಳು ಮಾಡುತ್ತಿದ್ದಾರೆ. ಓದುವ ಮಕ್ಕಳ ಕೈಗೆ ಪುಸ್ತಕ-ಪೆನ್ನು ನೀಡುವ ಬದಲು ಮದ್ಯವನ್ನು ನೀಡಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ತಂದೆ ಮಗ ಇಬ್ಬರ ವಿರುದ್ಧವು ಪ್ರತಿಭಟನೆ ಮಾಡುತ್ತೇವೆ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದೇನೆ ಎಂದು ಕಿಡಿಕಾರಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *