1 ತಿಂಗ್ಳ ಕಂದಮ್ಮನನ್ನ ಸ್ವಂತ ಕಾರಿನಲ್ಲಿ ಆಸ್ಪತ್ರೆಗೆ ಡ್ರಾಪ್ – ಪ್ರತಿ ಬಂದ್‍ನಲ್ಲೂ ಬಟ್ಟೆ ವ್ಯಾಪಾರಿಯಿಂದ ಉಚಿತ ಸೇವೆ

ಬೆಂಗಳೂರು: ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪರದಾಡುತ್ತಿದ್ದ ದಂಪತಿಗೆ ನಗರದ ಬಟ್ಟೆ ವ್ಯಾಪಾರಿಯೊಬ್ಬರು ಸಹಾಯಕ್ಕೆ ಮುಂದಾಗಿ ಮಾನವೀಯತೆ ತೋರಿಸಿದ್ದಾರೆ.

ಬೆಂಗಳೂರು ಬಟ್ಟೆ ವ್ಯಾಪಾರಿ ಸಭಾಪತಿ, ದಂಪತಿಗೆ ಸಹಾಯ ಮಾಡಿದ್ದಾರೆ. ಒಂದು ತಿಂಗಳ ಕಂದಮ್ಮ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿತ್ತು. ಇಂದೇ ನಾರಾಯಣ ನೇತ್ರಾಲಯಕ್ಕೆ ಕರೆದುಕೊಂಡು ಹೋಗಬೇಕಾಗಿತ್ತು. ಆದ್ದರಿಂದ ಬಿಜಾಪುರದಿಂದ ಬಂದಿದ್ದ ದಂಪತಿ ಮಗುವಿನ ಜೊತೆ ಬಸ್ಸಿಗಾಗಿ ಕಾದು ಕುಳಿತಿದ್ದರು.

ಸುಮಾರು ಮೂರು ತಾಸು ಕಾದು ಕುಳಿತರೂ ಬಸ್ ಬಂದಿರಲಿಲ್ಲ. ಇತ್ತ ಆಟೋಗೆ ಹೋಗೋದಕ್ಕೂ ಅವರ ಬಳಿ ಅಷ್ಟೋಂದು ಹಣವೂ ಇರಲಿಲ್ಲ. ಕೊನೆಗೆ ಸಭಾಪತಿ ಅವರು ಪುಟಾಣಿಯನ್ನು ಉಚಿತವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮಾನವೀಯತೆ ಮೆರೆದಿದ್ದಾರೆ.

ಬೆಂಗಳೂರು ಬಟ್ಟೆ ವ್ಯಾಪಾರಿ ಸಭಾಪತಿ ಪ್ರತಿ ವರ್ಷ ಬಂದ್ ಆದ ಸಂದರ್ಭದಲ್ಲಿ ಗರ್ಭಿಣಿಯರಿಗೆ, ಆಸ್ಪತ್ರೆಗೆ ಹೋಗುವವರಿಗೆ ಮತ್ತು ತುರ್ತು ಸೇವೆ ಬೇಕಾದವರಿಗೆ ಉಚಿತವಾಗಿ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ಮಾಡಿಕೊಂಡು ಬಂದಿದ್ದಾರೆ. ಈ ಬಾರಿಯೂ ಕೂಡ ಬಂದ್ ಸಮಯದಲ್ಲಿ ಬಿಜಾಪುರ ದಂಪತಿಯ ಮಗುವನ್ನು ಸ್ವತಃ ಸಭಾಪತಿ ಅವರೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಈ ವೇಳೆ ತಾಯಿ ಮಾತನಾಡಿ, ಮಗುವಿಗೆ ಕಣ್ಣಿನ ತೊಂದರೆ ಇದೆ. ಹೀಗಾಗಿ ನಾರಾಯಣ ಆಸ್ಪತ್ರೆಗೆ ತೋರಿಸಲು ಕರೆದುಕೊಂಡು ಬಂದಿದ್ದೇವೆ. ವೈದ್ಯರು ಚಿಕಿತ್ಸೆಗಾಗಿ ಇಂದೇ ಬರಬೇಕು ಎಂದು ಹೇಳಿದ್ದರು. ಆದ್ದರಿಂದ ಬೇಗ ತೋರಿಸಲು ಬಂದಿದ್ದೆವು. ಆದರೆ ಬಸ್ ಸಿಗಲಿಲ್ಲ. ಕೊನೆಗೆ ಇವರೇ ಆಸ್ಪತ್ರೆಗೆ ಬಿಟ್ಟಿದ್ದಾರೆ ಎಂದು ಸಂತಸದಿಂದ ಹೇಳಿದ್ದಾರೆ.

ನಾನು ಬಟ್ಟೆ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಬಂದ್ ವೇಳೆ ಈ ರೀತಿಯ ಸೇವೆ ಮಾಡುತ್ತೇವೆ. ಈ ರೀತಿ ಬಂದ್ ಮಾಡಿದರೆ ಯಾರಿಗೂ ಲಾಭವಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ವಯಸ್ಸಾದರಿಗೆ, ರೋಗಿಗಳಿಗೆ ಮತ್ತು ತುರ್ತು ಪರಿಸ್ಥಿಯಲ್ಲಿರುವರಿಗೆ ಸಹಾಯ ಮಾಡುತ್ತೇವೆ. ಬಂದ್ ಸಮಯದಲ್ಲಿ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಾರೆ ಎಂದು ಕಳಸ ಬಂಡೂರಿ ಸಮಯದಲ್ಲಿ ಮಾಧ್ಯಮಗಳಲ್ಲಿ ನೋಡಿದ್ದೇನೆ. ಆದ್ದರಿಂದ ಪ್ರತಿ ಬಾರಿ ಬಂದ್ ನಡೆದಾಗಲೂ ಉಚಿತ ಕ್ಯಾಬ್ ಸೇವೆ ನೀಡುತ್ತೇನೆ ಎಂದು ಸಭಾಪತಿ ಪಬ್ಲಿಕ್ ಟಿವಿಗೆ ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *