ಪುಟ್ಟರಂಗಶೆಟ್ಟಿ ಪರ ಬ್ಯಾಟ್ ಬೀಸಿ ಭ್ರಷ್ಟಾಚಾರಕ್ಕೂ ಜಾತಿ ಬಣ್ಣ ಬಳಿದ ಡಿ.ಕೆ.ಶಿವಕುಮಾರ್!

– ನಾನು ಆಟವಾಡೋ ಕಾಲ ಬಂದೆ ಬರುತ್ತೇ
– ಅಮವಾಸ್ಯೆ, ಗ್ರಹಣ ಎಲ್ಲವೂ ಮುಗಿದ್ಮೇಲೆ ನಿಗಮ ಮಂಡಳಿ ರಚನೆ

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಪರ ಬ್ಯಾಟ್ ಬೀಸಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಭ್ರಷ್ಟಾಚಾರಕ್ಕೂ ಜಾತಿ ಬಣ್ಣ ಬಳಿದು ಗೋಜಿಗೆ ಸಿಲುಕಿದ್ದಾರೆ.

ಪುಟ್ಟರಂಗಶೆಟ್ಟಿ ಅವರ ಕಚೇರಿಯ ಟೈಪಿಸ್ಟ್ ಬಳಿ ಲಕ್ಷಾಂತರ ಹಣ ಪತ್ತೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಪುಟ್ಟರಂಗಶೆಟ್ಟಿ ಅವರು ಹಿಂದುಳಿದ ವರ್ಗಕ್ಕೆ ಸೇರಿದವರು. ಅದನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲಿಕ್ಕೆ ಆಗುತ್ತಿಲ್ಲ. ಹೀಗಾಗಿ ಸುಳ್ಳು ಆರೋಪದ ಒಡ್ಡಿ ಮಂತ್ರಿ ಸ್ಥಾನಕ್ಕೆ ಪುಟ್ಟರಂಗಶೆಟ್ಟಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂದ ಅವರು, ಬಿಜೆಪಿಯವರಂತೆ ಪುಟ್ಟರಂಗಶೆಟ್ಟಿ ಚೆಕ್‍ನಲ್ಲಿ ಹಣ ಪಡೆದಿಲ್ವಲ್ಲ ಎಂದು ಕಿಡಿಕಾರಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಮೇಲೆ ಬಿಜೆಪಿಯವರು ಆರೋಪ ಮಾಡಬೇಕು ಅಷ್ಟೇ. ಹಣಕ್ಕೂ ಪುಟ್ಟರಂಗಶೆಟ್ಟಿ ಅವರಿಗೂ ಏನು ಸಂಬಂಧ? ಯಾರೋ ಹಣ ತೆಗೆದುಕೊಂಡು ಹೋದರೆ ಅದನ್ನು ಪುಟ್ಟರಂಗಶೆಟ್ಟಿ ಅವರಿಗೆ ಹೋಲಿಸುವುದು ಸರಿಯಲ್ಲ. ಅವರು ರಾಜೀನಾಮೆ ಕೊಡುವ ಅಗತ್ಯವಿಲ್ಲ. ಈ ಹಿಂದೆ ಬಿಜೆಪಿಯವರು ಚೆಕ್‍ನಲ್ಲಿ ಹಣ ಪಡೆದಿದ್ದರು. ಈ ಬಗ್ಗೆ ಐಟಿಯವರು ಯಾಕೆ ತನಿಖೆ ಮಾಡುತ್ತಿಲ್ಲ? ಯಾರ ಮೇಲೆ ಹೇಗೆ ಪ್ರಯೋಗ ನಡೆಯುತ್ತಿದೆ ಎನ್ನುವುದು ನನಗೆ ಗೊತ್ತಿದೆ. ಮುಂದಿನ ಅಧಿವೇಶನದಲ್ಲಿ ಈ ವಿಚಾರವಾಗಿ ಚರ್ಚೆಗೆ ಬಂದರೆ ನಾವು ಸಿದ್ಧ ಎಂದು ಗುಡುಗಿದರು.

ಹಿಂದುಳಿದ ವರ್ಗಕ್ಕೆ ಸೇರಿದ ಪುಟ್ಟರಂಗಶೆಟ್ಟಿ ಅವರು ಮಂತ್ರಿಯಾಗಿದ್ದಾರೆ. ಅದನ್ನು ಸಹಿಸಿಕೊಳ್ಳಲಾಗದೆ ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಹಣ ಪತ್ತೆ ಕುರಿತು ತನಿಖೆ ನಡೆಸಿ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದ ಸಚಿವರು, ಗೃಹ ಸಚಿವ ಎಂ.ಬಿ.ಪಾಟೀಲ್ ಹಾಗೂ ನನ್ನ ವಿರುದ್ಧ ಬಿಜೆಪಿಯವರು ಆರೋಪ ಮಾಡಿದ್ದರು. ನಾವು ಚರ್ಚೆ ಮಾಡಲು ಬಹಿರಂಗ ಸಭೆ ಕರೆದಿದ್ದೆವು. ಆದರೆ ಬಿಜೆಪಿಯವರೇ ಚರ್ಚೆಗೆ ಬರದೆ ಹಿಂದೆ ಸರಿದದರು ಎಂದು ವ್ಯಂಗ್ಯವಾಗಡಿದ ಸಚಿವರು, ನಾನು ಆಟ ಆಡುವ ಕಾಲ ಬಂದೆ ಬರುತ್ತದೆ ಎಂದು ಗುಡುಗಿದರು.

ನಿಗಮ ಮಂಡಳಿ ನೇಮಕ ಆದೇಶ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ನಾವು ಹಿಂದೂ ಸಂಸ್ಕೃತಿಯವರು. ಅಮವಾಸ್ಯೆ, ಗ್ರಹಣ ಎಲ್ಲವೂ ಆದ್ಮೇಲೆ ನಿಗಮ ಮಂಡಳಿ ರಚನೆ ಮಾಡಲಾಗುತ್ತದೆ. ನಿಗಮ ಮಂಡಳಿ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿ ಒಮ್ಮತ ಸಿಕ್ಕಿದೆ ಎಂದರು.

ಲೋಕಸಭಾ ಚುನಾವಣೆ ಕ್ಷೇತ್ರಗಳ ಹಂಚಿಕೆ ವಿಚಾರವಾಗಿ ಮಾತನಾಡಿದ ಸಚಿವರು, ಜೆಡಿಎಸ್ 12 ಸೀಟ್ ಕೇಳಿದ್ದು ತಪ್ಪೇನಲ್ಲ. ಅವರಿಗೂ ಆಸೆ ಇರುತ್ತದೆ. ಆಸೆ ಪಡೋದು ತಪ್ಪೇನ್ರಿ? 28 ಕ್ಷೇತ್ರದಲ್ಲೂ ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳೇ ಇರುತ್ತಾರೆ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *