ರೇವಣ್ಣ Vs ಮಂಜು – ಇಬ್ಬರ ಪ್ರತಿಷ್ಠೆಯ ಕಣದಲ್ಲಿ ಬೀದಿಗೆ ಬಂದ ಬಡ ಕಾರ್ಮಿಕರು!

ಹಾಸನ: ಮಾಜಿ ಪಶುಸಂಗೋಪನಾ ಸಚಿವ ಎ.ಮಂಜು ಹಾಗೂ ಹಾಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣರ ರಾಜಕೀಯ ವೈಷಮ್ಯಕ್ಕೆ ಬಡ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆನ್ನುವ ಆರೋಪ ಕೇಳಿಬಂದಿದೆ.

ಹೌದು, ಜಿಲ್ಲೆಯಲ್ಲಿ ಈ ಹಿಂದೆ ಮಾಜಿ ಪಶುಸಂಗೋಪನಾ ಸಚಿವರಾಗಿದ್ದ ಎ.ಮಂಜುರವರು ನೂರಾರು ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ಇಲಾಖೆಯಲ್ಲಿ ನೇಮಕ ಮಾಡಿಕೊಟ್ಟಿದ್ದರು. ಆದರೆ ಈಗ ರೇವಣ್ಣನವರು ಜಿಲ್ಲಾ ಉಸ್ತುವಾರಿಯಾಗಿ ನೇಮಕಗೊಂಡ ಬಳಿಕ, ಕ್ಷುಲ್ಲಕ ವಿಚಾರಕ್ಕೆ ನೂರಕ್ಕು ಹೆಚ್ಚು ಮಂದಿಯನ್ನು ಕೆಲಸದಿಂದ ವಜಾಗೊಳಿಸಿದ್ದಾರಂತೆ.

ಹಾಸನ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಈ ರೀತಿಯ ಗುತ್ತಿಗೆ ಆಧಾರದ ಮೇಲೆ ಪಶುಸಂಗೋಪನಾ ಇಲಾಖೆಯಲ್ಲಿ ನೌಕರರನ್ನು ನೇಮಿಸಿಕೊಳ್ಳಲಾಗಿತ್ತು. ಇವರೆಲ್ಲ ತಾಲೂಕು ಕೇಂದ್ರಗಳು ಮತ್ತು ಗ್ರಾಮೀಣ ಭಾಗದಲ್ಲಿ ಪಶು ಇಲಾಖೆಯ ವಿವಿಧ ಕೆಲಸಗಳನ್ನು ಮಾಡುತ್ತಿದ್ದರು. ಹಾಸನ ಜಿಲ್ಲೆಯಲ್ಲಿಯೂ ಸಹ ಮಾತಾ ಟೆಕ್ನಾಲಿಜಿಸ್ ಎಂಬ ಏಜನ್ಸಿ ಮೂಲಕ 135 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ ಈಗ ಸರ್ಕಾರ ಬದಲಾಗಿದ್ದರಿಂದ 100ಕ್ಕೂ ಹೆಚ್ಚು ಮಂದಿಯನ್ನು ಕಾರಣ ನೀಡದೆ ಕೆಲಸದಿಂದ ವಜಾ ಗೊಳಿಸಿದ್ದಾರೆ.

ಈ ಕುರಿತು ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾರ್ಮಿಕರು, ನಾವುಗಳು ಯಾವುದೇ ಪಕ್ಷಗಳಿಗೆ ಸೇರಿದವರಲ್ಲ. ನಮ್ಮ ಹೊಟ್ಟೆಪಾಡಿಗೆ ಗುತ್ತಿಗೆ ಆಧಾರದಲ್ಲಿ ಸೇರಿದ್ದೇವು. ಹಿಂದಿನ ಸಚಿವರ ಅವಧಿಯಲ್ಲಿ ನೇಮಕವಾಗಿರುವ ಕಾರಣಕ್ಕೆ ನಮ್ಮನ್ನು ಕೆಲಸದಿಂದ ವಜಾಮಾಡಿದ್ದಾರೆ. ಈ ಕೆಲಸವನ್ನೆ ನಂಬಿಕೊಂಡಿದ್ದ ನಮಗೆ ಸಂಕಷ್ಟಗಳಲ್ಲಿ ನರಳುವಂತಹ ಪರಿಸ್ಥಿತಿ ಎದುರಾಗಿದೆ. ಕೂಡಲೇ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೇ ಮುಂದಿನ ದಿನಗಳಲ್ಲಿ ಪ್ರತಿಭಟನೆ ಹಾದಿ ಹಿಡಿಯುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *