ಕುಂದಾ ನಗರಿಯಲ್ಲಿ ನಡೆಯುತ್ತಾ ಮಹಾ ಸ್ಕೆಚ್-ರಹಸ್ಯವಾಗಿ ನಡೆದಿದೆ ಅತಿದೊಡ್ಡ ಗೇಮ್ ಪ್ಲಾನ್!

ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆಯಾಗಿ 7 ತಿಂಗಳು ಕಳೆದಿದೆ. ಸರ್ಕಾರ ರಚನೆಯಾದ ದಿನದಂದಲೂ ಆಪರೇಷನ್ ಕಮಲದ ಮಾತುಗಳು ಕೇಳಿ ಬರುತ್ತಿವೆ. ವಿಧಾನಸಭೆ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾ ಬಿಜೆಪಿ ಹೊರಹೊಮ್ಮಿದರೂ ಸರ್ಕಾರ ರಚಿಸುವಲ್ಲಿ ವಿಫಲವಾಗಿತ್ತು. ಇತ್ತ ಕಾಂಗ್ರೆಸ್-ಜೆಡಿಎಸ್ ಜೊತೆಯಾಗಿ ಮೈತ್ರಿ ಸರ್ಕಾರ ರಚನೆ ಮಾಡಿದ್ದರೂ ಎರಡು ಪಕ್ಷಗಳ ಆಂತರಿಕ ಬೇಗುದಿ ಮಾತ್ರ ಕಡಿಮೆಯಾದಂತೆ ಕಾಣುತ್ತಿಲ್ಲ. ಸಂಪುಟ ಪುನಾರಚನೆಯ ಬಳಿಕ ಕಾಂಗ್ರೆಸ್ ನಲ್ಲಿ ಅಸಮಾಧಾನದ ಹೊಗೆ ಹರಿದಾಡುತ್ತಿದ್ದು, ಸಚಿವ ಸ್ಥಾನ ಕಳೆದುಕೊಂಡ ರಮೇಶ್ ಜಾರಕಿಹೊಳಿ ಅವರನ್ನು ಬಿಜೆಪಿಯತ್ತ ಸೆಳೆಯಲು ಕಮಲ ನಾಯಕರು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಚಿವ ಸ್ಥಾನದಿಂದ ಕೈ ಬಿಟ್ಟ ಹಿನ್ನೆಲೆಯಲ್ಲಿ ಸಹಜವಾಗಿ ಬೆಳಗಾವಿ ಜಿಲ್ಲೆಯ ಪ್ರಭಾವಿ ಮುಖಂಡ ರಮೇಶ್ ಜಾರಕಿಹೊಳಿ ಅಸಮಾಧಾನಗೊಂಡಿದ್ದಾರೆ. ರಮೇಶ್ ಜಾರಕಿಹೊಳಿ ಅವರನ್ನು ಸೆಳೆಯಲು ಬಿಜೆಪಿ ರಾಜ್ಯಾಧ್ಯಾಕ್ಷ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರಯತ್ನಿಸುತ್ತಿದ್ದಾರಂತೆ. ಬೆಂಗಳೂರಿನಲ್ಲಿರುವ ರಮೇಶ್ ಜಾರಕಿಹೊಳಿ ಅವರು ಇಂದು ಸಂಜೆ ಬೆಳಗಾವಿಗೆ ಪಯಣ ಬೆಳಸಲಿದ್ದಾರೆ. ಇತ್ತ ಯಡಿಯೂರಪ್ಪನವರು ನಾಳೆ(ಗುರುವಾರ) ಬೆಳಗ್ಗೆ ಬೆಳಗಾವಿಗೆ ಹೊರಡಲಿದ್ದಾರೆ.

ಈ ಇಬ್ಬರು ನಾಯಕರು ಬೆಳಗಾವಿಯಲ್ಲಿ ರಹಸ್ಯ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ರಮೇಶ್ ಜಾರಕಿಹೊಳಿ ಅವರು ಕಮಲ ಹಿಡಿಯಲು ಒಪ್ಪಿದ್ದಲ್ಲಿ ಬಿಜೆಪಿ ನಾಯಕರು ಅಖಾಡಕ್ಕೆ ಇಳಿಯಲು ಸಿದ್ಧವಾಗಲಿದ್ದಾರಂತೆ. ಒಟ್ಟಿನಲ್ಲಿ ಯಡಿಯೂರಪ್ಪ ಅವರ ಬೆಳಗಾವಿ ಭೇಟಿ ರಾಜಕೀಯ ಅಂಗಳದಲ್ಲಿ ಕುತೂಹಲ ಕೆರಳಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *