ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆಯಿಂದಾಗಿ ಉಂಟಾಗಿರುವ ಕೈ ನಾಯಕರ ಅಸಮಾಧಾನದ ಬಂಡಾಯ ಚಟುವಟಿಕೆಗಳಿಂದ ಅಂತರ ಕಾಯ್ದುಕೊಳ್ಳುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಸೂಚನೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಿಂದಾಗಿ ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದ ಕೈ ನಾಯಕರು ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ. ಇದರಿಂದಾಗಿ ಕಾಂಗ್ರೆಸ್ಸಿನಲ್ಲಿ ಅಸಮಾಧಾನದ ಬಿರುಗಾಳಿ ಸೃಷ್ಟಿಯಾಗಿದೆ. ಅಲ್ಲದೇ ಈ ಕುರಿತು ಖುದ್ದು ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ತಟಸ್ಥ ಧೋರಣೆಯನ್ನು ಹೊಂದುವಂತೆ ಸೂಚನೆಯನ್ನು ನೀಡಿದೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ರಾಷ್ಟ್ರಾಧ್ಯಕ್ಷ ಅಮಿತ್ ಶಾ ಖುದ್ದು ದೂರವಾಣಿ ಮೂಲಕ ಬಿ.ಎಸ್.ಯಡಿಯೂರಪ್ಪನವರಿಗೆ ಈ ಬಗ್ಗೆ ಸೂಚನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ. ಸದ್ಯಕ್ಕೆ ಕಾದು ನೋಡುವ ತಂತ್ರವಷ್ಟೇ ನಮ್ಮದಾಗಿರಬೇಕು. ಕೈ ಬಂಡಾಯದ ಚಟುವಟಿಕೆಗಳಿಂದ ಅಂತರವನ್ನು ಕಾಯ್ದುಕೊಳ್ಳಿ. ಬಹಿರಂಗವಾಗಿ ಯಾರೂ ಆಪರೇಷನ್ ಕಮಲದ ವಿಚಾರ ಮಾತನಾಡಬಾರದೆಂದು ಸೂಚಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇದಕ್ಕೆ ಉತ್ತರಿಸಿದ್ದ ಯಡಿಯೂರಪ್ಪನವರು ಹೌದು, ನಾವು ಬಹಿರಂಗವಾಗಿ ಈ ಬಗ್ಗೆ ಮಾತನಾಡುತ್ತಿಲ್ಲ. ಈ ಹಿಂದೆ ಅವರೆಲ್ಲ ನಮಗೆ ಕೈ ಕೊಟ್ಟಿದ್ದಾರೆ. ಹೀಗಾಗಿ ಅವರ ರಾಜೀನಾಮೆ ಬಳಿಕವಷ್ಟೇ, ನಾವು ಪಾನ್ ಮೂವ್ ಮಾಡುತ್ತೇವೆ. ರಾಜ್ಯದ ರಾಜಕೀಯ ಬೆಳವಣಿಗೆಗಳನ್ನು ನಿಮ್ಮ ಗಮನಕ್ಕೆ ತಂದು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv

Leave a Reply