ಬಿಜೆಪಿಯಿಂದ ಮಾತ್ರವೇ ರಾಮಮಂದಿರ ನಿರ್ಮಾಣ ಸಾಧ್ಯ: ಯೋಗಿ ಆದಿತ್ಯನಾಥ್

ಲಕ್ನೋ: ಬಿಜೆಪಿಯಿಂದ ಮಾತ್ರವೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಾಧ್ಯವೇ ಹೊರತು, ಬೇರೆ ಯಾವುದೇ ಪಕ್ಷಗಳಿಂದ ನಿರ್ಮಾಣ ಅಸಾಧ್ಯವೆಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಭಾನುವಾರ ಲಕ್ನೋ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ ಯುವ ಕುಂಭ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಬಿಜೆಪಿಯಿಂದ ಮಾತ್ರವೇ ಸಾಧ್ಯ. ಇದರಲ್ಲಿ ಯಾವುದೇ ಅನುಮಾನ ಬೇಡ. ಇದನ್ನು ಹೊರತುಪಡಿಸಿ ಇತರೆ ಯಾವುದೇ ಪಕ್ಷಗಳಿಂದ ಮಂದಿರದ ನಿರ್ಮಾಣ ಅಸಾಧ್ಯವೆಂದು ತಿಳಿಸಿದ್ದಾರೆ.

ಈ ವೇಳೆ ಸಭೆಯಲ್ಲಿ ಪಾಲ್ಗೊಂಡಿದ್ದವರು “ಯಾರು ರಾಮಮಂದಿರ ನಿರ್ಮಿಸುತ್ತಾರೋ, ಅವರಿಗೆ ನಮ್ಮ ಮತ” ಎಂದು ಘೋಷಣೆ ಕೂಗಿದ್ದಾರೆ.

ಇದೇ ವೇಳೆ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಮಾಯಣದ ಭಗವಾನ್ ಶ್ರೀರಾಮ ಹಾಗೂ ಮಹಾಭಾರತದ ಶ್ರೀಕೃಷ್ಣನ ಅಸ್ತಿತ್ವವನ್ನು ಪ್ರಶ್ನಿಸಿದವರು, ಇಂದು ಮತಕ್ಕಾಗಿ ಜನಿವಾರವನ್ನು ಪ್ರದರ್ಶಿಸುತ್ತಿದ್ದಾರೆ. ಅಂತಹವರಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಾಧ್ಯವೆಂಬ ಯಾವುದೇ ನಿರೀಕ್ಷೆಗಳೂ ಬೇಡ ಎಂದು ಹೇಳಿದರು.

ಇತಿಹಾಸಕಾರರು ನಮಗೆ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ. ಅದನ್ನು ತಿದ್ದಿ ಸರಿಯಾದ ಇತಿಹಾಸ ಬರೆಯುವ ಹೊಣೆಗಾರಿಕೆ ನಮ್ಮ ಮೇಲಿದೆ. ರಾಮಾಯಣದ ಪುಷ್ಪಕ ವಿಮಾನ ಸತ್ಯವಾಗಿದೆ. ಹಾಗೆಯೇ ಮಹರ್ಷಿ ಭಾರಧ್ವಾಜರು ವೈಮಾನಿಕ ಶಾಸ್ತ್ರವನ್ನು ರಚಿಸಿದ್ದು, ಈ ಶಾಸ್ತ್ರದಲ್ಲಿ ಪುಷ್ಪಕ ವಿಮಾನದ ಸಿದ್ಧಾಂತವಿದೆಯೆಂದು ತಿಳಿಸಿದರು.

ಪ್ರಯಾಗ್ ರಾಜ್ ನ ಮಹಾಕುಂಭಮೇಳವನ್ನು ಯುವ ವಿರೋಧ, ಮಹಿಳಾ ವಿರೋಧಿ ಹಾಗೂ ದಲಿತ ವಿರೋಧಿಯಂದು ಬಿಂಬಿಸಲಾಗುತ್ತಿದೆ. ಈ ಕುಂಭಮೇಳವು ಭಾರತೀಯ ಸಂಸ್ಕೃತಿಯನ್ನು ವಿಶ್ವ ಮಟ್ಟದಲ್ಲಿ ಪ್ರತಿಬಿಂಬಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *