ಎರಡು ವರ್ಷದ ಹಿಂದಿನ ಗಂಗಾವತಿಯ ಕೋಮುಗಲಭೆಗೆ ಗುಲಾಬಿ ಹೂ ಮೂಲಕ ತೆರೆ

ಕೊಪ್ಪಳ: ಹನುಮ ಮಾಲಾಧಾರಿಗಳಿಗೆ ಗುಲಾಬಿ ಹೂವು ನೀಡುವ ಮೂಲಕ ಎರಡು ವರ್ಷದ ಹಿಂದೆ ನಡೆದಿದ್ದ ಕೋಮುಗಲಭೆಗೆ ಗಂಗಾವತಿ ಮುಸ್ಲಿಮರು ತೆರೆ ಎಳೆದಿದ್ದಾರೆ.

ಕೆಲ ಕಿಡಿಗಳ ಕೃತ್ಯದಿಂದಾಗಿ ಗಂಗಾವತಿಯು ಕಳೆದ ಎರಡು ವರ್ಷಗಳಿಂದ ಹಿಂದೂ-ಮುಸ್ಲಿಂ ಕೋಮುಗಲಭೆಗೆ ತತ್ತರಿಸಿ ಹೋಗಿತ್ತು. ಆದರೆ ಇಂದು ನಡೆದ ಹನುಮ ಮಾಲೆಯ ವಿಸರ್ಜನೆ ಸಮಯದಲ್ಲಿ ಹಿಂದೂ-ಮುಸ್ಲಿಮರು ಭಾವೈಕ್ಯತೆ ಮೆರೆದು ಹಳೆಯ ವೈಷಮ್ಯಕ್ಕೆ ತೆರೆ ಎಳೆದಿದ್ದಾರೆ. ಈ ದೃಶ್ಯವನ್ನು ಕಂಡ ಜನರು ನೆಮ್ಮದಿಯ ಉಸಿರು ಬಿಟ್ಟಿದ್ದಾರೆ.

ಗಂಗಾವತಿ ನಗರದ ಮೂಲಕ ಅಂಜನಾದ್ರಿ ಬೆಟ್ಟಕ್ಕೆ ಅನೇಕರು ಮೆರವಣಿಗೆ ಹೋಗುತ್ತಾರೆ. ಬಳಿಕ ಮೆಟ್ಟಿಲು ಹತ್ತಿ ಆಂಜನೇಯನ ದರ್ಶನ ಪಡೆಯುತ್ತಾರೆ. ಅಲ್ಲಿಯೇ ಮಾಲಾಧಾರಿಗಳು ಮಾಲೆಯನ್ನು ವಿಸರ್ಜನೆ ಮಾಡುತ್ತಾರೆ. ಹೀಗಾಗಿ ನಗರದ ಮೂಲಕ ಹೋಗುವ ಹಾಗೂ ಬೆಟ್ಟದಲ್ಲಿದ್ದ ಮಾಲಾಧಾರಿಗಳಿಗೆ ಮುಸ್ಲಿಂ ಭಾಂದವರು ಗುಲಾಬಿ ಹೂವು ನೀಡಿ ಶುಭಕೋರಿದರು.

ಇಂದು ಏನಾಯ್ತು?
ಉತ್ತರ ಕರ್ನಾಟಕದ ಸುಮಾರು 18 ಜಿಲ್ಲೆಗಳ ಹನುಮ ಮಾಲಾಧಾರಿಗಳು ಇಂದು ಗಂಗಾವತಿಯ ಅಂಜನಾದ್ರಿ ಬೆಟ್ಟಕ್ಕೆ ಮಾಲೆ ವಿಸರ್ಜನೆ ಮಾಡಲು ಆಗಮಿಸಿದ್ದರು. ಈ ವಿಶೇಷ ಕಾರ್ಯಕ್ರಮಕ್ಕೆ ಇಂದು ಕೊನೆಯ ದಿನವಾಗಿದ್ದು, ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ಮಾಲಾಧಾರಿಗಳಿಗೆ ಗಂಗಾವತಿ ನಗರದ ಮುಸ್ಲಿಂ ಮುಖಂಡರು, ಕಿರಿಯರು ಗುಲಾಬಿ ಹೂವು, ಹಣ್ಣು ಹಿಡಿದು ಅಂಜನಾದ್ರಿ ಬೆಟ್ಟಕ್ಕೆ ಸ್ವಾಗತಿಸಿದರು.

ಕೊರಳಿಗೆ ಹನುಮಂತನ ಚಿತ್ರವಿದ್ದ ಕೇಸರಿ ಶಾಲು ಹಾಕಿಕೊಂಡು ನಿಂತಿದ್ದ ಮುಸ್ಲಿಂ ಬಾಂಧವರು, ಹುನುಮ ಮಾಲಾಧಾರಿಗಳನ್ನು ತಬ್ಬಿಕೊಂಡು ಭಾಯಿ ಭಾಯಿ ಎಂದು ಹೇಳಿ ಶುಭಕೋರಿದರು. ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಿ, ಮಾಲಾಧಾರಿಗಳಿಗೆ ರಕ್ಷಣೆ ನೀಡಿ, ಧೈರ್ಯ ತುಂಬಿದರು.

ಹಿಂದೆ ಏನಾಗಿತ್ತು?
2016ರಲ್ಲಿ ನಡೆದ ಹನುಮ ಮಾಲಾ ವಿಸರ್ಜನೆ ಕಾರ್ಯಕ್ರಮಕ್ಕೆ ಸ್ವಾಗತಕೊರಲು ಗಂಗಾವತಿಯಲ್ಲಿ ಬ್ಯಾನರ್ ಹಾಗೂ ಕೇಸರಿ ಧ್ವಜಗಳನನ್ನು ಹಾಕಲಾಗಿತ್ತು. ಇದನ್ನು ಕೆಲವರು ತೀವ್ರವಾಗಿ ವಿರೋಧಿಸಿದ್ದರು. ಬಳಿಕ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಹೊಡೆದಾಟವಾಗಿತ್ತು. ಪರಿಸ್ಥಿತಿ ಕೈಮಿರುತ್ತಿದ್ದಂತೆ ಪೊಲೀಸರು ಲಾಠಿ ಚಾರ್ಜ್ ನಡೆಸಿ ನಿಯಂತ್ರಿಸಿದ್ದರು.

ಈ ಘಟನೆಯಿಂದಾಗಿ ಗಂಗಾವತಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಷ್ಟೇ ಅಲ್ಲದೆ ಯಾವುದೇ ಸಾರ್ವಜನಿಕ ಆಚರಣೆ, ಮೆರವಣಿಗೆಯನ್ನು ನಡೆಸುವಂತಿಲ್ಲ ಎಂದು ಜಿಲ್ಲಾಡಳಿತ ಆದೇಶ ಜಾರಿ ಮಾಡಿತ್ತು. ಪರಿಣಾಮ ಕಳೆದ ಎರಡು ವರ್ಷಗಳಿಂದ ಗಣೇಶ ವಿಸರ್ಜನೆ, ಮೊಹರಂ ಸೇರಿದಂತೆ ಅನೇಕ ಹಬ್ಬಗಳನ್ನು ಅದ್ಧೂರಿಯಾಗಿ ಆಚರಿಸಲು ಆಗಿರಲಿಲ್ಲ.

ಘಟನೆಯಿಂದಾಗಿ 2017ರಲ್ಲಿ ಜಿಲ್ಲೆಯ ಹುನುಮ ಮಾಲಾಧಾರಿಗಳಿಗೆ ಮಾತ್ರ ಅಂಜನಾದ್ರಿ ಬೆಟ್ಟಕ್ಕೆ ಮಾಲಾ ವಿಸರ್ಜನೆಗೆ ಅವಕಾಶ ನೀಡಲಾಗಿತ್ತು. ಈ ವೇಳೆ ಭಾರೀ ಭದ್ರತೆ ಒದಗಿಸಲಾಗಿತ್ತು. ಈ ಬಾರಿಯೂ 1,500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಹನುಮ ಮಾಲಾ ವಿಸರ್ಜನೆ ಕಾರ್ಯಕ್ರಮಕ್ಕೆ ನಿಯೋಜನೆ ಮಾಡಲಾಗಿತ್ತು. ಗಂಗಾವತಿಯ ಪ್ರಮುಖ ಸರ್ಕಲ್‍ನಲ್ಲಿ ಅದ್ಧೂರಿಯಾಗಿ ಮೆರವಣಿಗೆ ನಡೆಯಿತು. ಇಂದು ನಡೆದ ಕಾರ್ಯಕ್ರಮದಲ್ಲಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಭಾಗಿಯಾಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *