ಗೋಪುರ ವಿಚಾರಕ್ಕೆ ಅಸಮಾಧಾನವಿತ್ತು, ಆದ್ರೆ ವಿಷ ಬೆರೆಸಿಲ್ಲ- ಶಂಕಿತರಿಂದ ಗೊಂದಲದ ಹೇಳಿಕೆ

ಚಾಮರಾಜನಗರ: ಇಲ್ಲಿ ಸುಳುವಾಡಿ ಮಾರಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿದ ಬಳಿಕ ಮೃತಪಟ್ಟ ಭಕ್ತರ ಸಂಖ್ಯೆ ಇಂದು 18ಕ್ಕೆ ಏರಿದೆ. ಆದ್ರೆ ಇತ್ತ ವಶಕ್ಕೆ ಪಡೆದ ಇಬ್ಬರು ಶಂಕಿತರು ಪ್ರಕರಣದ ಬಗ್ಗೆ ಗೊಂದಲವಾದ ಹೇಳಿಕೆ ನೀಡುತ್ತಿದ್ದಾರೆ.

ನಾವು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆವು. ಗೋಪುರ ವಿಚಾರಕ್ಕೆ ಅಸಮಾಧಾನ ಇದ್ದದ್ದು ನಿಜ. ಆದ್ರೆ ವಿಷ ಬೆರೆಸಿಲ್ಲ. ಈ ಘಟನೆಯಲ್ಲಿ ನನ್ನ ಸಂಬಂಧಿಗಳು ಕೂಡ ಆಸ್ಪತ್ರೆಯ ಪಾಲಾಗಿದ್ದಾರೆ ಎಂದು ಪೊಲೀಸರ ಮುಂದೆ ಶಂಕಿತ ಮಾದೇಶ್ ಹೇಳಿಕೆ ನೀಡಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ.

ಪ್ರಕರಣ ಸಂಬಂಧ ನಾಲ್ವರು ಶಂಕಿತರನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಲಾಗುತ್ತಿದೆ. ಸದ್ಯ ಆಹಾರದ ವಸ್ತುವನ್ನು ಎಫ್ ಎಸ್ ಎಲ್ ಗೆ ರವಾನೆ ಮಾಡಲಾಗಿದೆ. ಆಹಾರದಲ್ಲಿ ಯಾವ ವಿಷಕಾರಿ ಅಂಶ ಇದೆ ಎಂಬುದರ ಬಗ್ಗೆ ತಿಳಿದುಕೊಳ್ಳಲಾಗುತ್ತಿದೆ. ವೈದ್ಯರು ಕ್ರಿಮಿನಾಶಕ ಬೆರೆಸಿರುವುದಾಗಿ ಅಭಿಪ್ರಾಯ ಪಟ್ಟಿದ್ದಾರೆ. ತನಿಖೆ ನಡೆಯುತ್ತಾ ಇದೆ ಶಂಕಿತರೇ ದ್ವಂದ್ವದಲ್ಲಿ ಇರೋದು ಸ್ವಲ್ಪ ಕಷ್ಟವಾಗ್ತಿದೆ ಅಂತ ತಿಳಿದುಬಂದಿದೆ.

ಘಟನೆ ವಿವರ:
ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದ ಗೋಪುರ ಶಂಕುಸ್ಥಾಪನೆ ಶುಕ್ರವಾರ ನಡೆದಿತ್ತು. ವಿವಿಧ ಪೂಜಾ ಕಾರ್ಯಗಳು ಮುಗಿದ ಬಳಿಕ ಮಧ್ಯಾಹ್ನ ಭಕ್ತರಿಗೆ ಪ್ರಸಾದ (ರೈಸ್‍ಬಾತ್) ವ್ಯವಸ್ಥೆ ಮಾಡಲಾಗಿತ್ತು. ಸುಳ್ವಾಡಿ ಸುತ್ತಮುತ್ತಲಿನ ಅನೇಕ ಗ್ರಾಮದ ಜನರು ದೇವಿಯ ದರ್ಶನಕ್ಕೆ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಶಂಕುಸ್ಥಾಪನೆ ಬಳಿಕ ಕೆಲವರು ಪ್ರಸಾದ ಸೇವಿಸಿ ತಮ್ಮ ಮನೆಗೆ ಹಾಗೂ ಊರುಗಳಿಗೆ ತೆರಳಿದರು. ದೇವಸ್ಥಾನದ ಪ್ರಸಾದ ಸೇವಿಸಿದ ಬಳಿಕ ಎಲ್ಲರ ಕಣ್ಣುಗಳು ನೀಲಿ ಬಣ್ಣಕ್ಕೆ ತಿರುಗಿದೆ. ಎಲ್ಲರನ್ನೂ ಗಮನಿಸಿದಾಗ ಉಸಿರಾಟದ ತೊಂದರೆ ಕಾಣಿಸಿದೆ. ಪ್ರಸಾದದಲ್ಲಿ ಕ್ರಿಮಿನಾಶಕ ಅಥವಾ ಟಿಕ್-20 ಬೆರೆಸಿರುವ ಸಾಧ್ಯತೆ ಇದೆ ಎಂದು ಮೈಸೂರು ಜಿಲ್ಲಾಸ್ಪತ್ರೆ ಡಿ.ಎಚ್.ಒ ಡಾ.ಬಸವರಾಜ್ ಹೇಳಿದ್ದರು.


ದೇವಾಲಯ ಬಂದ್:
ಇನ್ನು ದುರಂತದ ಪರಿಣಾಮ ಇತಿಹಾಸದಲ್ಲೇ ಮೊದಲ ಬಾರಿಗೆ ಸುಳ್ವಾಡಿಯ ಕಿಚ್ಚುಗುತ್ತು ಮಾರಮ್ಮ ಗುಡಿಗೆ ಬೀಗ ಜಡಿಯಲಾಗಿದೆ. ನಿತ್ಯವೂ ಧಾರ್ಮಿಕ ಚಟುವಟಿಕೆಗಳಿಂದ ಕೂಡಿರುತ್ತಿದ್ದ ದೇವಸ್ಥಾನವನ್ನು ಬಂದ್ ಮಾಡಲಾಗಿದೆ. ದೇವಸ್ಥಾನದ ಪುರೋಹಿತರು, ಅಡುಗೆ ತಯಾರಕರು, ಭದ್ರತಾ ಸಿಬ್ಬಂದಿಯ ಕುಟುಂಬಗಳಲ್ಲೂ ಸಾವು, ನೋವು ಸಂಭವಿಸಿದ್ದು, ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *