ಭಯೋತ್ಪಾದನೆಯ ವಿರುದ್ಧ ಹೋರಾಡಲು ಸಾಧ್ಯವಾಗದಿದ್ದರೆ, ಭಾರತದ ಸಹಾಯ ಕೇಳಿ: ಪಾಕಿಸ್ತಾನಕ್ಕೆ ರಾಜನಾಥ್ ಸಿಂಗ್

ಜೈಪುರ: ಭಯೋತ್ಪಾದನೆಯ ವಿರುದ್ಧ ಹೋರಾಡಲು ಸಾಧ್ಯವಾಗದೇ ಇದ್ದರೆ, ಭಾರತದ ಸಹಾಯ ಕೇಳಿ ಎಂದು ಪಾಕಿಸ್ತಾನಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.

ಚುನಾವಣಾ ನಿಮಿತ್ತ ರಾಜಸ್ಥಾನದ ರಾಜಧಾನಿಯಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಮೂಲಕ ಪಾಕಿಸ್ತಾನ ಪ್ರಧಾನಿ ಇರ್ಮಾನ್ ಖಾನ್ ಅವರಿಗೆ ಹೇಳುವುದೇನೆಂದರೆ, ಅಫ್ಘಾನಿಸ್ತಾನದಲ್ಲಿ ಅಡಗಿರುವ ಉಗ್ರರನ್ನು ಸದೆಬಡಿಯಲು ಅಮೆರಿಕದ ಸಹಾಯವನ್ನು ಪಡೆದು ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ. ಆದರೂ ಭಯೋತ್ಪಾದನೆಯನ್ನು ನಿಗ್ರಹಿಸಲು ಕಷ್ಟವೆನಿಸಿದರೆ, ಭಾರತದ ಸಹಾಯವನ್ನು ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಾಲ್ಕು ವರ್ಷಗಳಲ್ಲಿ ಯಾವುದೇ ಭಯೋತ್ಪಾದನಾ ದಾಳಿಯೇ ನಡೆದಿಲ್ಲವೆಂದು ಹೇಳಲ್ಲ. ಆದರೆ ಭಾರತದಲ್ಲಿ ಯಾವುದೇ ರೀತಿಯ ದೊಡ್ಡ ಭಯೋತ್ಪಾದನಾ ದಾಳಿಗಳು ನಡೆದಿಲ್ಲ. ಪ್ರವಾಸೋದ್ಯಮದಲ್ಲಿ ಸ್ವರ್ಗವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಪರಿಸ್ಥಿತಿ ಸುಧಾರಿಸುತ್ತಿದೆ. ಕೇಂದ್ರ ಸರ್ಕಾರ ಆ ರಾಜ್ಯವನ್ನು ರಾಜಕೀಯ ಪ್ರಕ್ರಿಯೆಗೆ ತರುವಲ್ಲಿ ಯಶಸ್ವಿಯಾಗಿದೆ. ಆದರೆ ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಪಾಕಿಸ್ತಾನ ಪ್ರಾಯೋಜಕತ್ವವನ್ನು ನೀಡುತ್ತಿದೆ ಎನ್ನುವ ಸಂಶಯವೇ ಇಲ್ಲವೆಂದು ಕಿಡಿಕಾರಿದ್ದಾರೆ.

ದೇಶದಲ್ಲಿ ಶೇ.50 ರಿಂದ ಶೇ.60 ರಷ್ಟು ನಕ್ಸಲ್ ದಾಳಿಗಳು ಕಡಿಮೆಯಾಗಿದೆ. 90 ಜಿಲ್ಲೆಗಳಲ್ಲಿ ನಡೆಯುತ್ತಿದ್ದ ನಕ್ಸಲ್ ಚಟುವಟಿಕೆ ಈಗ 8 ರಿಂದ 9 ಜಿಲ್ಲೆಗಳಲ್ಲಿ ಮಾತ್ರ ಉಳಿದಿದೆ. ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ನಕ್ಸಲರ ಸಮಸ್ಯೆಯು ಕೂಡ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *