ನಾಯಿಗಳನ್ನೇ ನಿಯಂತ್ರಿಸಲಾಗದ ನೀವು ಭಯೋತ್ಪಾದಕರನ್ನು ಹೇಗೆ ನಿಭಾಯಿಸ್ತೀರಾ: ಗುಜರಾತ್ ಹೈಕೋರ್ಟ್

dogs

ಗಾಂಧಿನಗರ: ಬೀದಿ ನಾಯಿಗಳನ್ನೇ ನಿಯಂತ್ರಣ ಮಾಡಲಾಗದ ನೀವು ಭಯೋತ್ಪಾದಕರನ್ನು ಹೇಗೆ ನಿಭಾಯಿಸುತ್ತೀರಾ ಎಂದು ಗುಜರಾತ್ ಹೈಕೋರ್ಟ್ ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರ(ಎಎಐ)ವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಅಹಮದಾಬಾದ್ ನಲ್ಲಿರುವ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಬೀದಿ ನಾಯಿಗಳು ಸುಳಿಯದಂತೆ ಇಲ್ಲವೇ ಪ್ರತಿ ದಿನ ನಾಯಿ ಸಾಗಿಸುವ ವಾಹನ ಅಥವಾ ಅವುಗಳನ್ನು ಕೊಲ್ಲುವ ಅನುಮತಿಯನ್ನು ನಗರಸಭೆಗೆ ಸೂಚನೆ ನೀಡುವಂತೆ ಎಎಐ ಗುಜರಾತ್ ಹೈಕೋರ್ಟಿಗೆ ಮನವಿ ಮಾಡಿಕೊಂಡಿತ್ತು.

ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಗುಜರಾತ್ ಹೈ ಕೋರ್ಟಿನ ನ್ಯಾಯಮೂರ್ತಿ ಅನಂತ್ ಡೇವ್ ಸೇರಿದ ದ್ವಿ-ಸದಸ್ಯ ಪೀಠ, ಎಎಐ ಮನವಿಯನ್ನು ತಿರಸ್ಕರಿಸಿದೆ. ಅಲ್ಲದೇ ನಿಮಗೆ ಬೀದಿ ನಾಯಿಗಳನ್ನೇ ನಿಯಂತ್ರಿಸಲು ಸಾಧ್ಯವಾಗದೇ ಇದ್ದರೆ, ಒಂದು ವೇಳೆ ಭಯೋತ್ಪಾದಕರು ವಿಮಾನ ನಿಲ್ದಾಣಕ್ಕೆ ನುಗ್ಗಿದಾಗ ಏನು ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ಬೀದಿ ನಾಯಿಗಳ ಹಾವಳಿಯಿಂದ ವಿಮಾನ ಹಾರಾಟದಲ್ಲಿ ವ್ಯತ್ಯಯಗೊಂಡಿದೆ ಎಂಬ ಕಾರಣಗಳನ್ನು ನೀಡಿದ್ದರ ಜೊತೆಗೆ, ನಾಯಿಗಳನ್ನು ಕೊಲ್ಲುವ ಬಗ್ಗೆಯೂ ಎಎಐ ಪ್ರಸ್ತಾಪ ಮಾಡಿತ್ತು. ಆದರೆ ಎಎಐ ಮನವಿಯನ್ನು ಗುಜರಾತ್ ಹೈ-ಕೋರ್ಟ್ ತಳ್ಳಿಹಾಕಿದೆ.

ಏನಿದು ಪ್ರಕರಣ?
ಬೀದಿ ನಾಯಿಗಳ ಹಾವಳಿಯಿಂದಾಗಿ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗುತ್ತಿದೆ ಎಂದು ಆರೋಪಿಸಿ ಎಎಐ 2017ರ ಡಿಸೆಂಬರ್ ನಲ್ಲಿ ಹೈ-ಕೋರ್ಟ್ ಗೆ ಮನವಿ ಸಲ್ಲಿಸಿತ್ತು. ಮನವಿಯಲ್ಲಿ ಪ್ರತಿ ದಿನ ಬೀದಿ ನಾಯಿ ಹೊತ್ತೊಯ್ಯುವ ವಾಹನವನ್ನು ಕಳಿಸಬೇಕು ಅಥವಾ ನಾವು ಕರೆ ಮಾಡಿದಾಗ ಕರೆಸಬೇಕು, ವಿಮಾನ ನಿಲ್ದಾಣದ 40 – 50 ಕಿ.ಮೀ ಸುತ್ತಮುತ್ತ ನಾಯಿಗಳು ಸುಳಿಯದಂತೆ ನಗರಸಭೆಗೆ ಸೂಚನೆ ನೀಡಬೇಕೆಂದು ತಿಳಿಸಿತ್ತು.

ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಗೊಂಡಿದ್ದ ಹೈ-ಕೋರ್ಟ್ ಏಕಸದಸ್ಯ ಪೀಠ, 2017 ರಲ್ಲಿ ನಾಯಿ ಕಾರಣದಿಂದಾಗಿ ಕೇವಲ 3 ಬಾರಿ ವಿಮಾನ ವ್ಯತ್ಯಯಗೊಂಡಿರುವುದರಿಂದ ಪ್ರತಿ ದಿನ ನಗರಸಭೆಯ ವಾಹನಗಳನ್ನು ಕಳಿಸಿಕೊಡಲು ನಿರ್ದೇಶಿಸುವುದು ಸಾಧ್ಯವಿಲ್ಲವೆಂದು ಎಎಐ ಅರ್ಜಿಯನ್ನು ತಿರಸ್ಕರಿಸಿತ್ತು. ಅಲ್ಲದೇ ಈ ಸಂಬಂಧ ಸೂಕ್ತ ಕ್ರಮಗಳನ್ನು ಎಎಐ ತೆಗೆದುಕೊಳ್ಳಬೇಕೆಂದು ಅಭಿಪ್ರಾಯಪಟ್ಟಿತ್ತು. ಹೀಗಾಗಿ ಎಎಐ ಮತ್ತೊಮ್ಮೆ ದ್ವಿ-ಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *