ಉಡುಪಿ: ಕೋಮುಸೂಕ್ಷ್ಮ ಪ್ರದೇಶವಾದ ಉಡುಪಿಯಲ್ಲಿ ಹಿಂದು ಮುಸ್ಲಿಂ ಭಾಯಿ ಭಾಯಿ ಅಂತ ಎರಡು ಧರ್ಮೀಯರು ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮ ಮಾಸವನ್ನು ವಿಶಿಷ್ಟವಾಗಿ ಆಚರಣೆ ಮಾಡಿದ್ದಾರೆ.
ಉಡುಪಿಯ ಸಂತೆಕಟ್ಟೆ ಸಮೀಪದ ನೇಜಾರು ಪ್ರದೇಶ ಪೊಲೀಸರಿಗೆ ಸದಾ ತಲೆನೋವಿನ ಸ್ಥಳ. ನೇಜಾರಿನಲ್ಲಿ ಆಗಾಗ ಹಿಂದೂ ಮುಸ್ಲಿಂ ನಡುವೆ ಸಂಘರ್ಷಗಳು ನಡೆಯುತ್ತಿತ್ತು. ಆದರೆ ಈ ಬಾರಿ ನೇಜಾರ್ ಜುಮ್ಮಾ ಮಸೀದಿಯ ಆಶ್ರಯದಲ್ಲಿ ಈದ್ ಮಿಲಾದ್ ಮೆರವಣಿಗೆಗೆ ಹಿಂದೂಗಳು ಸಾಥ್ ಕೊಟ್ಟಿದ್ದಾರೆ.

ಪ್ರವಾದಿ ಮಹಮ್ಮದರ ಸಂದೇಶ ಜಾಥಾ ನಡೆದಾಗ ಭಜನಾ ಮಂಡಳಿ ಹಾಗೂ ಯುವಕ ಸಂಘಗಳು ಶರಬತ್ತು, ಐಸ್ ಕ್ರೀಂ, ಪಾನಕ, ಸಿಹಿತಿಂಡಿ ಮಜ್ಜಿಗೆ ನೀಡಿದ್ದಾರೆ. ನೇಜಾರ್ ನಿಂದ ಆರಂಭವಾದ ಮೆರವಣಿಗೆ ಸಂತೆಕಟ್ಟೆ- ಕಲ್ಯಾಣಪುರದವರೆಗೆ ಸಾಗಿ ವಾಪಾಸ್ಸಾಗಿದೆ. ಮೆರವಣಿಗೆ ಸಾಗಿದ 5 ಕಿಲೋಮೀಟರ್ ಉದ್ದಕ್ಕೂ ಶ್ರೀ ಗುರೂ ಯುವಕ ಮಂಡಳಿ, ಶಾರದಾಂಬಾ ಭಜನಾ ಮಂಡಳಿ, ಸಂತಕಟ್ಟೆ ಟೆಂಪೋ ಚಾಲಕ ಮಾಲಕರು ಪಾನೀಯ, ತಿಂಡಿ-ತಿನಸುಗಳನ್ನು ಹಂಚಿದ್ದಾರೆ.
ಮೆರವಣಿಗೆಯಲ್ಲಿ 1000 ಮಿಕ್ಕಿ, ದಫ್, ಸ್ಕೌಟ್ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು. ಈ ಬಾರಿ ಮೆರವಣಿಗೆ ವೇಳೆ ಪೊಲೀಸ್ ಇಲಾಖೆ ನಿರಾಳವಾಗುತ್ತು ಹಾಗೆಯೆ ಯಾವುದೇ ಗೊಂದಲಗಳಿಲ್ಲದೆ ಕಾರ್ಯಕ್ರಮ ನಡೆಯಿತು.

ಇಸ್ಲಾಮಿಕ್ ಷರಿಯತ್ ಕಾಲೇಜು ಉಪಪ್ರಾಂಶುಪಾಲ ನೌಫಲ್ ಮದನಿ ಮಾತನಾಡಿ, ಈ ಬಾರಿ ತುಂಬಾ ಸಂತೋಷ ಆಗಿದೆ. ಹಿಂದೂಗಳಿಗೂ ಆಮಂತ್ರಣ ಕೊಟ್ಟಿದ್ದೇವೆ. ಅವರೂ ಊಟಕ್ಕೆ ಬಂದಿದ್ದಾರೆ. ಮೆರವಣಿಗೆ ವೇಳೆ ಜ್ಯೂಸ್, ಐಸ್ ಕ್ರೀಂ, ನೀರು ಕೊಟ್ಟು ಉತ್ತಮ ಬಾಂಧವ್ಯ ಸೃಷ್ಟಿಯಾಗುವಂತೆ ಮಾಡಿದ್ದಾರೆ. ಧಾರ್ಮಿಕ ಗ್ರಂಥದಲ್ಲಿ ಉಲ್ಲೇಖಿಸಿದಂತೆ ದೇಶವನ್ನು ಮೊದಲು ಪ್ರೀತಿಸಬೇಕು. ನೆರೆಮನೆಯವರು ಹಸಿದಿರುವಾಗ ತಾನೊಬ್ಬನೆ ಹಬ್ಬ ಮಾಡುವವ ಮುಸಲ್ಮಾನ ಅಲ್ಲ ಎಂಬ ಮಾತು ಈ ಬಾರಿ ನಿಜವಾಗಿದೆ. ಶಾಂತಿ, ಸಹಬಾಳ್ವೆ ಕರುಣೆಯಿಂದ ಮೆರವಣಿಗೆ ನಡೆದಿದೆ ಮುಂದೆಯೂ ಹೀಗೆಯೇ ಸಹಬಾಳ್ವೆಯಿಂದ ನೇಜಾರು ಪ್ರಸಿದ್ಧಿಯಾಗಲಿ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply