ರಾಮ ಮಂದಿರ ಜನಜಾಗೃತಿ ಸಭೆಗೆ ಉಚಿತ ಬಸ್: ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ

ಮಂಗಳೂರು: ನಗರದಲ್ಲಿ ಆಯೋಜಿಸಿರುವ ರಾಮ ಮಂದಿರ ಉದ್ದೇಶಿತ ಜನಜಾಗೃತಿ ಸಭೆಗೆ ಖಾಸಗಿ ಬಸ್ ಮಾಲೀಕರ ಸಂಘದಿಂದ ಉಚಿತವಾಗಿ ಬಸ್ ವ್ಯವಸ್ಥೆ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಭಾನುವಾರ ಜನಜಾಗೃತಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ದಕ್ಷಿಣ ಕನ್ನಡ ಖಾಸಗಿ ಬಸ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ದಿಲ್‍ರಾಜ್ ಶೆಟ್ಟಿ, ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್ ಮನವಿಯಂತೆ ಉಚಿತ ಬಸ್ ವ್ಯವಸ್ಥೆ ಮಾಡುವಂತೆ ಸೂಚಿಸಿ ಸಂಘದ ಪದಾಧಿಕಾರಿಗಳಿಗೆ ಆದೇಶ ಪತ್ರ ಹೊರಡಿಸಿದ್ದರು.

ಸಂಘದ ಲೆಟರ್ ಹೆಡ್‍ನಲ್ಲಿ ನೀಡಿರುವ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಉಚಿತವಾಗಿ ಬಸ್ ವ್ಯವಸ್ಥೆ ಮಾಡಿದ್ದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿದ್ದ ದಿನೇಶ್ ಅಮಿನ್ ಮಟ್ಟು ಅವರು ಕೂಡ ದಕ್ಷಿಣ ಕನ್ನಡ ನ್ಯೂಸ್ ಹೆಸರಿನ ವಾಟ್ಸಪ್ ಗ್ರೂಪ್‍ನಲ್ಲಿ ಕಿಡಿಕಾರಿದ್ದಾರೆ. ಅಯೋಧ್ಯೆಯ ಶ್ರೀ ರಾಮಜನ್ಮ ಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಸಲುವಾಗಿ ಕೇಂದ್ರ ಮೈದಾನ ಮಂಗಳೂರಿನಲ್ಲಿ ನಡೆಯುವ ಸಭೆಗೆ ಉಚಿತ ಬಸ್ ಒದಗಿಸಲಾಗಿದೆ. ಕೇಸರಿ ಶಾಲು ಧರಿಸಿ ಬರುವ ಪ್ರಯಾಣಿಕರಿಗೆ ಮಂಗಳೂರು – ಮೂಲ್ಕಿಗೆ ಬೆಳಗ್ಗೆ ಹಾಗೂ ಸಂಜೆ ಉಚಿತ ಬಸ್ ಸೇವೆ ಒದಗಿಸಲಾಗುತ್ತಿದೆ. ಈ ಕುರಿತು ಕೆನರಾ ಬಸ್ ಮಾಲೀಕರು ಸದಸ್ಯರ ಬಳಿ ಮನವಿ ಮಾಡಿಕೊಂಡಿದ್ದಾರೆ ಎಂದು ದಿನೇಶ್ ಅಮಿನ್ ಮಟ್ಟು ವ್ಯಂಗ್ಯವಾಡಿದ್ದಾರೆ.

ಮಾಲೀಕರಿಂದ ಸ್ಪಷ್ಟನೆ: ನಾವು ಪ್ರತಿ ಬಾರಿಯೂ ಉಚಿತ ಬಸ್ ವ್ಯವಸ್ಥೆ ಮಾಡುತ್ತೇವೆ. ಕಾಂಗ್ರೆಸ್, ಬಿಜೆಪಿ ಅಥವಾ ಜಿಲ್ಲಾಡಳಿತದ ಯಾವುದೇ ಕಾರ್ಯಕ್ರಮಕ್ಕೆ ಬಸ್ ಕೇಳಿದರೆ, ಉಚಿತವಾಗಿಯೇ ಕೊಡುತ್ತೇವೆ. ಆದರೆ ಈ ಬಾರಿ ದುಬಾರಿ ವೆಚ್ಚದ ಕಾರಣ ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮಕ್ಕೆ ಬಸ್ಸಿನಲ್ಲಿ ಬರುವವರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಟ್ಟಿದ್ದೇವೆ ಅಷ್ಟೇ. ಬಸ್ ಅನ್ನು ಉಚಿತವಾಗಿ ಬಿಟ್ಟು ಕೊಟ್ಟಿಲ್ಲ ಎಂದು ದಿಲ್‍ರಾಜ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಉಚಿತ ಬಸ್ ವ್ಯವಸ್ಥೆಯ ಕುರಿತು ಅರಿವಿಲ್ಲದ ಮಂದಿ ಹೇಳಿಕೆಯ ಪ್ರತಿಯನ್ನು ಜಾಲತಾಣದಲ್ಲಿ ಹರಿ ಬಿಡುತ್ತಿದ್ದಾರೆ. ದಿನೇಶ್ ಅಮಿನ್ ಮಟ್ಟು ಕೂಡ ಇದೆ ಹೇಳಿಕೆಯ ಪ್ರತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ರಾಮ ಮಂದಿರ ವಿಚಾರ ಬಿಜೆಪಿ ಮುಖ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಖಾಸಗಿಯವರು ಬಸ್ ವ್ಯವಸ್ಥೆ ಮಾಡಿದ್ದಾರೆಂದು ಬಿಂಬಿಸಿ, ಟೀಕೆ ಮಾಡುತ್ತಿದ್ದಾರೆ ಎಂದು ಖಾಸಗಿ ಬಸ್ ಮಾಲೀಕರು ಸ್ಪಷ್ಟನೆ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *