ರಾತ್ರೋರಾತ್ರಿ ಎಂಜಿನಿಯರಿಂಗ್ ಮಗಳನ್ನೇ ಸುಟ್ಟು ಹಾಕಿದ್ರಾ ಪೋಷಕರು?

ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಕಲ್ಲಜ್ಜನಾಳು ಗ್ರಾಮದಲ್ಲಿ ಯುವತಿ ಮರ್ಯಾದಾ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಕಲ್ಲಜ್ಜನಾಳು ಗ್ರಾಮದ ಮಾನಸಾ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆತ್ಮಹತ್ಯೆ ಮಾಡಿಕೊಂಡು ಮಗಳು ಮೃತಪಟ್ಟಿದ್ದಾಳೆ ಎಂದು ಪೋಷಕರು ಹೇಳಿದ್ದರೆ. ಆದರೆ ಮಗಳನ್ನು ಕೊಲೆ ಮಾಡಿ ನೇಣು ಹಾಕಲಾಗಿದೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಶಂಕೆ ಬಂದಿದ್ದು ಯಾಕೆ?
ಮಾನಸಾ ಬೆಂಗಳೂರಿನ ಚಂದಾಪುರದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದಳು. ಈಕೆ ಸಂಬಂಧಿ ಯುವಕನನ್ನು ಮದುವೆ ಆಗಲು ಬಯಸಿದ್ದಳು. ಇದಕ್ಕೆ ಹುಡುಗನ ಮನೆಯವರೂ ಕೂಡ ಒಪ್ಪಿದ್ದರು. ಆದರೆ ಮಾನಸಾ ಮನೆಯವರು ಒಪ್ಪಿರಲಿಲ್ಲ.

ಕಳೆದ ವಾರ ಯುವಕನಿಗೆ ಬೇರೊಬ್ಬ ಯುವತಿ ಜೊತೆ ವಿವಾಹ ನಿಶ್ಚಯವಾಗಿತ್ತು. ಆದರೂ ಮಾನಸಾ ಇದೇ ಯುವಕನ ಜೊತೆ ಮದುವೆ ಆಗಲು ಹಠ ಹಿಡಿದಿದ್ದಳು ಎನ್ನಲಾಗಿದೆ. ಇದೇ ವಿಷಯಕ್ಕೆ ಮಾನಸಾಳ ಮನೆಯಲ್ಲಿ ಜಗಳ ಕೂಡಾ ಆಗಿತ್ತು ಎನ್ನಲಾಗಿದೆ.

ಹುಡುಗಿ ತಂದೆ ಇನ್ನಿತರರು ಗುರುವಾರ ಹುಡುಗನ ಮನೆಗೆ ಬಂದು ಗಲಾಟೆ ಮಾಡಿದ್ದರು. ಈ ಸಂದರ್ಭದಲ್ಲಿ ನನ್ನ ಮಗಳಿಗೆ ವಿಷ ಕುಡಿಸಿ ಸಾಯಿಸುವೆ. ಆದರೆ ನಿಮ್ಮ ಮಗನಿಗೆ ಮದುವೆ ಮಾಡಿಕೊಡಲ್ಲ ಎಂದು ಯುವತಿ ತಂದೆ ಗುಡುಮಲ್ಲಪ್ಪ ಹೇಳಿದ್ದರು. ಇದೇ ವಿಷಯಕ್ಕೆ ನಿನ್ನೆ ಯುವತಿಗೆ ಪೋಷಕರು ಹೊಡೆದಿದ್ದಾರೆ. ಬಳಿಕ ನೇಣು ಹಾಕಿಕೊಂಡು ಮೃತಪಟ್ಟಿದ್ದಾಳೆ ಎಂದು ಬಿಂಬಿಸಿದ್ದಾರೆ ಎನ್ನಲಾಗಿದೆ.

ಮಾನಸಾಳ ಮೃತ ದೇಹವನ್ನು ಸ್ಥಳೀಯ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಅವರು ಸರಿಯಾಗಿ ಮರಣೋತ್ತರ ಪರೀಕ್ಷೆ ನಡೆಸದೇ ಮೃತದೇಹವನ್ನು ಪೋಷಕರಿಗೆ ನೀಡಿದ್ದಾರೆ. ಪೋಷಕರು ಆಕೆ ಮೃತಪಟ್ಟಿರುವ ಬಗ್ಗೆ ಪೊಲೀಸರಿಗೆ ದೂರು ನೀಡದೆ ರಾತ್ರೋರಾತ್ರಿ ದೇಹವನ್ನು ಸುಟ್ಟು ಹಾಕಿದ್ದಾರೆ.

ಪೋಷಕರ ಸಂಪ್ರದಾಯದ ಪ್ರಕಾರ ದೇಹವನ್ನು ಹೂಳಲಾಗುತ್ತದೆ. ಆದರೆ ಇಷ್ಟು ತುರ್ತಾಗಿ ರಾತ್ರಿ ವೇಳೆಯೇ ಸುಟ್ಟು ಹಾಕುವ ಅಗತ್ಯವೇನಿತ್ತು ಎಂಬ ಪ್ರಶ್ನೆ ಈಗ ಗ್ರಾಮಸ್ಥರಲ್ಲಿ ಮೂಡಿದೆ. ಈ ಘಟನೆ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರೂ ಸಹ ಈ ಬಗ್ಗೆ ಮಾಹಿತಿ ಇದ್ದು, ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಅನುಮಾನಕ್ಕೆ ಕಾರಣವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *