ಮಂಡ್ಯ: ಸೋಮವಾರ ನಿಧನರಾಗಿದ್ದ ಕೇಂದ್ರ ಸಚಿವ ಅನಂತಕುಮಾರ್ ಅವರ ಅಸ್ಥಿಯನ್ನು ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಹರಿಯುವ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು.
ದಿವಂಗತ ಅನಂತಕುಮಾರ್ ಅವರ ಸಹೋದರ ನಂದ ಕುಮಾರ್ ಅವರು ಇಂದು ಅಸ್ಥಿ ವಿಸರ್ಜನೆಯನ್ನು, ವೇದಬ್ರಹ್ಮ ಡಾಕ್ಟರ್ ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಬ್ರಾಹ್ಮಣ ಸಂಪ್ರದಾಯದಂತೆ ಅಸ್ಥಿಗೆ ಪಂಚಾಮೃತ, ಪಂಚಗವ್ಯ ಅಭಿಷೇಕವನ್ನು ಮಾಡಿ, ನಂತರ ದೂಪ ದೀಪ ನೈವೇದ್ಯದಿಂದ ಕಾವೇರಿ ಮಾತೆಗೆ ಫಲಗಳ ಅರ್ಪಣೆ ಮಾಡಿ ಪಶ್ಚಿಮ ವಾಹಿನಿಯಲ್ಲಿ ಅವರ ಅಸ್ಥಿಯನ್ನು ವಿಸರ್ಜನೆ ಮಾಡಲಾಯಿತು.

ತುಲಾಮಾಸದಲ್ಲಿ ಗಂಗೆಯೇ ಕಾವೇರಿಯಲ್ಲಿ ವಾಸ ಮಾಡುತ್ತಾಳೆ ಎಂಬ ನಂಬಿಕೆ ಇದೆ. ಈ ಸಮಯದಲ್ಲಿ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಿದ್ದು, ಧಾರ್ಮಿಕವಾಗಿಯೂ ಮಹತ್ವ ಪಡೆದುಕೊಂಡಿತ್ತು. ಅಸ್ಥಿ ವಿಸರ್ಜನೆ ವೇಳೆ ಅನಂತಕುಮಾರ್ ಕುಟುಂಬಸ್ಥರು, ಬಿಜೆಪಿ ಮುಖಂಡರಾದ ಪ್ರಹ್ಲಾದ್ ಜೋಷಿ, ರಾಮದಾಸ್, ಪ್ರತಾಪ್ ಸಿಂಹ, ಶ್ರೀರಂಗಪಟ್ಟಣದ ತಾಲೂಕು ಬಿಜೆಪಿ ಅಧ್ಯಕ್ಷ ಶ್ರೀಧರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕೇಂದ್ರ ಸಚಿವ ಅನಂತ ಕುಮಾರ್ ಅವರು ಸೋಮವಾರ ನಸುಕಿನ ಜಾವ ಶಂಕರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ನಂತರ ಅವರ ಮೃತದೇಹವನ್ನು ಬೆಂಗಳೂರಿನ ಬಸವನಗುಡಿಯಲ್ಲಿರೋ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ರಾಜಕೀಯ ಮುಖಂಡರು ಹಾಗೂ ಗಣ್ಯರು ಸೇರಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಸೋಮವಾರ ಅಂತಿಮ ದರ್ಶನ ಪಡೆದಿದ್ದರು.

ಅದಮ್ಯ ಚೇತನ, ದೆಹಲಿಯ ಕನ್ನಡದ ಧ್ವನಿ, ಬಡವರ ಬಂಧು, ಧೀಮಂತ ನಾಯಕ, ಸ್ನೇಹ ಜೀವಿ, ಕರ್ನಾಟಕ ಬಿಜೆಪಿಯ ಆಧಾರಸ್ತಂಭ ಅನಂತಕುಮಾರ್ರ ಪಾರ್ಥಿವ ಶರೀರವನ್ನು ಮಂಗಳವಾರ ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರವನ್ನು ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಗಿತ್ತು. ಪುರೋಹಿತ ಶ್ರೀನಾಥ್ ಅವರ ನೇತೃತ್ವದಲ್ಲಿ ಸಹೋದರ ನಂದಕುಮಾರ್ ಅವರು ಅಂತಿಮ ವಿಧಿ ವಿಧಾನ ನೆರವೇರಿಸಿ, ಅಗ್ನಿ ಸ್ಪರ್ಶ ಮಾಡಿದ್ದರು. ಈ ವೇಳೆ ಅನಂತ ಕುಮಾರ್ ಅವರ ಕುಟುಂಬಸ್ಥರು, ಸಂಬಂಧಿಕರು, ಆಪ್ತರು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಭಾಗವಹಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Leave a Reply