ಪಿಎನ್‍ಬಿ ವಂಚನೆ ಪ್ರಕರಣ: ಮೆಹುಲ್ ಚೋಕ್ಸಿ ಆಪ್ತನ ಬಂಧನ

ಕೋಲ್ಕತಾ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯ ಆಪ್ತನನ್ನು ಜಾರಿ ನಿರ್ದೇಶನಾಲಯದ(ಇಡಿ) ಅಧಿಕಾರಿಗಳು ಬಂಧಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಹಾಂಕಾಂಗ್ ನಿಂದ ಆಗಮಿಸಿದ್ದ ದೀಪಕ್ ಕುಲಕರ್ಣಿಯನ್ನು ಕೋಲ್ಕತ್ತ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಡಿ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ. ಮಂಗಳವಾರ ಕುಲಕರ್ಣಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಮುಂಬೈಗೆ ಕರೆದೊಯ್ಯಲಾಗುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೆಹುಲ್ ಚೋಕ್ಸಿಯ ಎಲ್ಲಾ ಸಾಗರೋತ್ತರ ವ್ಯವಹಾರಗಳನ್ನು ದೀಪಕ್ ಕುಲಕರ್ಣಿ ನಿಭಾಯಿಸುತ್ತಿದ್ದ. ಇದಲ್ಲದೇ ಹಾಂಕಾಂಗ್ ನಲ್ಲಿ ಚೋಕ್ಸಿಗೆ ಸೇರಿದ್ದ ಡಮ್ಮಿ ಸಂಸ್ಥೆಯ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದ್ದು, ಯಾವುದೇ ದೇಶದಲ್ಲಿ ಅಡಗಿದ್ದರೂ ಬಂಧನಕ್ಕೆ ಆದೇಶ ಸಿಕ್ಕಿದೆ.

ನೀರವ್ ಮೋದಿ ಜೊತೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗೀತಾಂಜಲಿ ಜುವೆಲ್ಲರಿಯ ಮೆಹುಲ್ ಚೋಕ್ಸಿ ವಿರುದ್ಧ ಕೂಡ ಸಿಬಿಐ ಎಫ್‍ಐಆರ್ ದಾಖಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನಾಲ್ಕು ಬಾರಿ ಸಮನ್ಸ್ ನೀಡಿದರೂ ಆರೋಪಿಗಳಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಇಂಟರ್ ಪೋಲ್‍ಗೆ ಮನವಿ ಮಾಡಿಕೊಂಡಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *