ಮುಂಬೈ: ಹುಚ್ಚು ಅಭಿಮಾನಿಯೊಬ್ಬ ಬಾಲಿವುಡ್ ನಟ ಶಾರೂಖ್ ಖಾನ್ ಅವರ ಹುಟ್ಟುಹಬ್ಬದಂದು ಅವರನ್ನು ಭೇಟಿ ಮಾಡಲು ಸಾಧ್ಯವಾಗದ್ದಕ್ಕೆ ಬೇಸರಗೊಂಡು ತನ್ನ ಕತ್ತನ್ನು ಕುಯ್ದುಕೊಂಡಿದ್ದಾನೆ.
ಈ ಘಟನೆ ಶುಕ್ರವಾರ ಬಾಂದ್ರಾದಲ್ಲಿ ನಡೆದಿದ್ದು, ಮೊಹಮ್ಮದ್ ಸಲೀಂ ಎಂಬ ಹುಚ್ಚು ಅಭಿಮಾನಿಯೇ ತನ್ನ ನೆಚ್ಚಿನ ನಟನನ್ನು ಭೇಟಿ ಮಾಡಲು ಆಗಲಿಲ್ಲವೆಂದು ಕತ್ತನ್ನೇ ಸೀಳಿಕೊಂಡಿದ್ದಾನೆ. ಶುಕ್ರವಾರ ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ಅವರು ತಮ್ಮ 53ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಈ ವೇಳೆ ಶಾರೂಕ್ ಅವರ ಮನ್ನತ್ ಮನೆ ಮುಂದೆ ಸಾವಿರಾರು ಅಭಿಮಾನಿಗಳು ಭೇಟಿ ನೀಡಿ ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭ ಕೋರುತ್ತಿದ್ದರು.

ಶಾರೂಖ್ ಮನೆಯ ಬಳಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ಸಂಪೂರ್ಣ ಭದ್ರತಾ ವ್ಯವಸ್ಥೆ ಹಾಕಿ ಅಭಿಮಾನಿಗಳನ್ನು ಮನೆ ಒಳಗಡೆ ತೆರಳಲು ಬಿಡಲಿಲ್ಲ. ಇದರಿಂದಾಗಿ ಅಭಿಮಾನಿ ಮೊಹಮ್ಮದ್ ಸಲೀಂ ಮನನೊಂದು ಶುಕ್ರವಾರ ಬೆಳಗಿನ ಜಾವ 3.05 ಕ್ಕೆ ತನ್ನ ಗಂಟಲನ್ನು ಚಾಕುವಿನಿಂದ ಸೀಳಿಕೊಂಡಿದ್ದಾನೆ. ತಕ್ಷಣ ಅಲ್ಲೇ ಇದ್ದ ಪೊಲೀಸರು ಆತನನ್ನು ಬಾಬಾ ಆಸ್ಪತ್ರೆಗೆ ಕರೆದುಕೊಂಡು ಪ್ರಥಮ ಚಿಕಿತ್ಸೆಯನ್ನು ನೀಡಿದ್ದಾರೆ.
ಚಿಕಿತ್ಸೆಯ ಬಳಿಕ ಸಲೀಂ ಅವರ ಪತ್ನಿಯನ್ನು ಕರೆಸಿ ಆತನನ್ನು ಮನೆಗೆ ಕಳುಹಿಸಲಾಗಿದೆ. ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಈ ಘಟನೆ ಸಂಬಂಧಪಟ್ಟಂತೆ ಡೈರಿಯಲ್ಲಿ ನಮೂದಿಸಲಾಗಿದ್ದು, ಸಲೀಂ ವಿರುದ್ಧ ಯಾವುದೇ ಪ್ರಕರಣವನ್ನು ದಾಖಲಿಸಿಕೊಂಡಿಲ್ಲ ಎಂದು ಅಧಿಕಾರಿ ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply