ದ್ರಾವಿಡ್, ಗಂಗೂಲಿ ದಾಖಲೆ ಮುರಿದ ರೋಹಿತ್, ಕೊಹ್ಲಿ ಜೋಡಿ

ತಿರುವನಂತಪುರ: ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ಹಾಗೂ ನಾಯಕ ವಿರಾಟ್ ಕೊಹ್ಲಿ ಜಂಟಿ ದಾಖಲೆ ಬರೆದಿದ್ದು, ಏಕದಿನ ಕ್ರಿಕೆಟ್‍ನಲ್ಲಿ ಭಾರತ ಪರ ವೇಗವಾಗಿ 4 ಸಾವಿರ ರನ್ ಪೂರೈಸಿದ ಜೋಡಿ ಎಂಬ ಹೆಗ್ಗಳಿಕೆ ಪಡೆದಿದೆ.

ವಿಂಡೀಸ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ 99 ರನ್ ಜೊತೆಯಾಟ ನೀಡಿದ್ದ ಈ ಜೋಡಿ ಟೀಂ ಇಂಡಿಯಾ ಭರ್ಜರಿ ಗೆಲುವಿಗೆ ಕಾರಣವಾಗಿತ್ತು. ಈ ಹಿಂದೆ ಟೀಂ ಇಂಡಿಯಾ ಪರ ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ 80 ಜೊತೆಯಾಟಗಳಲ್ಲಿ 4 ಸಾವಿರ ರನ್ ಪೂರೈಸಿದ್ದರು. ಆದರೆ ಕೊಹ್ಲಿ, ರೋಹಿತ್ ಜೋಡಿ ಕೇವಲ 66 ಜೊತೆಯಾಟಗಳಲ್ಲಿ ಈ ಸಾಧನೆ ಮಾಡಿದೆ.

ವಿಂಡೀಸ್ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‍ನಲ್ಲಿದ್ದ ಇಬ್ಬರು ಆಟಗಾರರು ರನ್ ಹೊಳೆ ಹರಿಸಿದ್ದರು. ಟೂರ್ನಿಯಲ್ಲಿ ಹ್ಯಾಟ್ರಿಕ್ ಶತಕ ಗಳಿಸಿದ್ದ ಕೊಹ್ಲಿ ಒಟ್ಟಾರೆ 453 ರನ್ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಇತ್ತ 2 ಶತಕ ಮತ್ತು ಒಂದು ಅರ್ಧಶತಕ ಸಿಡಿಸಿರುವ ರೋಹಿತ್ 389 ರನ್ ಕಲೆ ಹಾಕಿ ಸರಣಿಯಲ್ಲಿ ಹೆಚ್ಚು ರನ್ ಗಳಿಸಿದ 2ನೇ ಆಟಗಾರ ಎನಿಸಿಕೊಂಡರು. ವಿಶೇಷವಾಗಿ ಇಬ್ಬರ ಜೋಡಿ ಇದುವರೆಗೂ 15 ಶತಕಗಳ ಜೊತೆಯಾಟದಲ್ಲಿ ಭಾಗಿಯಾಗಿದೆ. ಇದರೊಂದಿಗೆ 4 ಸಾವಿರ ರನ್ ಪೂರೈಸಿದ ವಿಶ್ವದ 13ನೇ ಹಾಗೂ ಭಾರತದ 6ನೇ ಜೋಡಿಯಾಗಿದೆ.

ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ 899 ಅಂಕಗಳೊಂದಿಗೆ ಕೊಹ್ಲಿ ಮೊದಲ ಸ್ಥಾನ ಪಡೆದಿದ್ದು, ರೋಹಿತ್ ಶರ್ಮಾ 871 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇಬ್ಬರ ನಡುವೆ 64 ಅಂಕಗಳ ವ್ಯತ್ಯಾಸವಿದೆ. ಉಳಿದಂತೆ ರೋಹಿತ್ ಏಕದಿನ ಕ್ರಿಕೆಟ್ ನಲ್ಲಿ 187 ಇನ್ನಿಂಗ್ಸ್ ಗಳಲ್ಲಿ 200 ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದು, ಈ ಹಿಂದೆ 195 ಇನ್ನಿಂಗ್ಸ್ ಗಳಲ್ಲಿ 200 ಸಿಕ್ಸರ್ ಸಿಡಿಸಿದ್ದ ಪಾಕಿಸ್ತಾನದ ಶಹೀದ್ ಆಫ್ರಿದಿ ದಾಖಲೆಯನ್ನು ಮುರಿದಿದ್ದಾರೆ.

ಉಳಿದಂತೆ ಅಂತಿಮ ಏಕದಿನ ಪಂದ್ಯದಲ್ಲಿ ಭರ್ಜರಿ ಜಯಗಳಿಸಿದ ಟೀಂ ಇಂಡಿಯಾ 5 ಪಂದ್ಯಗಳ ಏಕದಿನ ಸರಣಿಯನ್ನು 3-1 ಅಂತರದಲ್ಲಿ ತನ್ನದಾಗಿಸಿಕೊಂಡಿದೆ. ಏಕದಿನ ಸರಣಿಗೂ ಮುನ್ನ ಟೆಸ್ಟ್ ಟೂರ್ನಿ ಗೆದ್ದು ಬೀಗಿದ್ದ ಟೀಂ ಇಂಡಿಯಾ ಸದ್ಯ ಮುಂದಿನ ಟಿ20 ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *