ಹೊರ ರಾಜ್ಯದಲ್ಲಿ ಕನ್ನಡ ಕಲಿತ ವಿದ್ಯಾರ್ಥಿಗಳ ನೋವಿನ ಕಥೆ

ಬೆಂಗಳೂರು: ನವೆಂಬರ್ ತಿಂಗಳು ಬಂತು ಅಂದ್ರೆ ರಾಜ್ಯ ಸರ್ಕಾರ, ಕನ್ನಡ ಸಂಸ್ಕೃತಿ ಇಲಾಖೆ ಹಾಗು ಕನ್ನಡ ಪ್ರಾಧಿಕಾರದವರು ಸೇರಿದಂತೆ ಕನ್ನಡ ಸಂಘಟನೆಗಳು ಕನ್ನಡ ರಾಜ್ಯೋತ್ಸವ ಎಂದು ಬೊಬ್ಬೆ ಹೊಡೆಯುತ್ತಾರೆ. ಸರ್ಕಾರವಾಗಲಿ, ಕನ್ನಡ ಪರ ಸಂಘಟನೆಗಳಾಗಲಿ ಹೊರ ರಾಜ್ಯಗಳಲ್ಲಿರುವ ಕನ್ನಡ ಶಾಲೆಗಳ ಬಗ್ಗೆ ಹಾಗು ಅಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಬಗ್ಗೆ ಸ್ವಲ್ಪವು ಕಾಳಜಿ ವಹಿಸದೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ.

ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸಮೀಪದಲ್ಲಿರುವ ಗಡಿಭಾಗವಾದ ತಮಿಳುನಾಡಿನ ಗುಮ್ಮಳಾಪುರದಲ್ಲಿ ತಮಿಳು ಶಾಲೆಗಳ ಪೈಪೋಟಿಯ ಮಧ್ಯೆ ಕನ್ನಡದ ಶಾಲೆ ಇದೆ. ಇದು ಕರ್ನಾಟಕ ಸರ್ಕಾರದಿಂದ ನಡೆಯುತ್ತಿರುವುದು ಅಲ್ಲ. ತಮಿಳುನಾಡು ಸರ್ಕಾರ ಈ ಶಾಲೆಯನ್ನು ನಡೆಸುತ್ತಿದೆ. ತಮಿಳುನಾಡಿನ ಸರ್ಕಾರಿ ಕನ್ನಡ ಶಾಲೆಯಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿರುವ ಸುಮಾರು 400 ರಿಂದ 500 ಬಡ ವಿದ್ಯಾರ್ಥಿಗಳ ವ್ಯಾಸಂಗ ಮಾಡುತ್ತಿದ್ದಾರೆ.

ಕರ್ನಾಟಕದಲ್ಲಿರುವ ಸರ್ಕಾರಿ ಶಾಲೆಗಳಿಗೆ ಕಡಿಮೆ ಇಲ್ಲ ಎಂಬಂತೆ ಈ ಶಾಲೆ ಸಾಕಷ್ಟು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಕರ್ನಾಟಕದಲ್ಲಿರುವ ಸರ್ಕಾರಿ ಶಾಲೆಗಳನ್ನು ಸರಿಯಾಗಿ ನಡೆಸಿ ನಿರ್ವಹಣೆ ಮಾಡಲು ಸಾಧ್ಯವಾಗದೆ ಮುಚ್ಚುತ್ತಿದ್ದು, ತಮಿಳುನಾಡಿನಲ್ಲಿರುವ ಈ ಕನ್ನಡ ಶಾಲೆಯಲ್ಲಿಯಲ್ಲಿಯೂ ಇದೇ ರೀತಿ ಸಮಸ್ಯೆಗಳಿದ್ದು, ವಿದ್ಯಾರ್ಥಿಗಳಿಗೆ ಸರಿಯಾದ ಮೂಲಭೂತ ಸೌಕರ್ಯಗಳು ಹಾಗು ಕ್ಲಾಸ್ ರೂಮ್‍ಗಳು ಇಲ್ಲದೆ ಶಾಲೆಯ ಹೊರಗಡೆ ಮೈದಾನದಲ್ಲಿ ಮಕ್ಕಳು ಕುತ್ತು ಪಾಠ ಕೇಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಶಾಲೆಯಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಶಿಕ್ಷಣವಿದ್ದು ಪ್ರತಿ ವರ್ಷವೂ 90% ಫಲಿತಾಂಶ ಬರುತ್ತಿದೆ. ಕರ್ನಾಟಕದಲ್ಲಿರುವ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ ನಂತರ ಉನ್ನತ ಶಿಕ್ಷಣಕ್ಕಾಗಿ ಕಾಲೇಜುಗಳಲ್ಲಿ ಸೀಟಿಗಾಗಿ ಹೋದರೆ ನೀವು ತಮಿಳುನಾಡಿನಲ್ಲಿ ಓದಿದ್ದು, ನಿಮಗೆ ಮೀಸಲಾತಿ ಕೊಡುವುದಕ್ಕೆ ಆಗುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ಶಿಕ್ಷಣ ಮಂಡಳಿ ಹೇಳುತ್ತಿದೆ. ವಿದ್ಯಾರ್ಥಿಗಳು ನಾವು ತಮಿಳುನಾಡಿನ ಸರ್ಕಾರಿ ಶಾಲೆಯಲ್ಲಿ ಓದಿದ್ದೇ ತಪ್ಪಾಯ್ತ ಎಂದು ಹೇಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ವಿದ್ಯಾರ್ಥಿಗಳಿಗೆ ಇಷ್ಟವಿರುವ ವಿಷಯವನ್ನು ತೆಗೆದುಕೊಂಡು ಶಿಕ್ಷಣ ಮುಂದುವರೆಸಲು ಕರ್ನಾಟಕದಲ್ಲಿ ಕಾಲೇಜುಗಳಲ್ಲಿ ಸೀಟು ಸಿಗದೆ ವಂಚಿತರಾಗುತ್ತಿದ್ದಾರೆ. ತಮಿಳುನಾಡಿನಲ್ಲಿರುವ ಶಾಲೆಗಳಿಗೆ ವಿದ್ಯಾರ್ಥಿಗಳು ಬರುವುದು ಸಹ ಕಡಿಮೆ ಆಗುತ್ತಿದೆ. ಆನೇಕಲ್ ತಮಿಳುನಾಡು ಗಡಿಭಾಗವಾಗಿದ್ದು ತಮ್ಮಪುರ, ಜೀಗೂರು, ಬ್ಯಾಲದ ಕೆರೆ, ಮದಗೊಂಡನಹಳ್ಳಿ ಇನ್ನು ಹತ್ತಾರು ಶಾಲೆಗಳು ತಾಲೂಕಿನ ಗಡಿಭಾಗದಲ್ಲಿದ್ದು ಸರ್ಕಾರವು ಕೂಡಲೇ ಹೊರ ರಾಜ್ಯಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಕರ್ನಾಟಕ ಕಾಲೇಜುಗಳಲ್ಲಿ ಉನ್ನತ ಶಿಕ್ಷಣವನ್ನು ಮಾಡಲು 5% ನಿಂದ 10% ನಷ್ಟು ಮೀಸಲಾತಿ ನೀಡಬೇಕಿದೆ. ಇದರಿಂದ ಸಾಕಷ್ಟು ಹೊರರಾಜ್ಯದ ಮಕ್ಕಳು ಕನ್ನಡ ಶಾಲೆಗಳಲ್ಲಿ ವ್ಯಾಸಂಗ ಮಾಡುವಂತಾಗುತ್ತದೆ. ಇಲ್ಲವಾದರೆ ಹೊರರಾಜ್ಯಗಳಲ್ಲಿ ಇರುವಂತಹ ಬೆರಳೆಣಿಕೆಯಷ್ಟು ಕನ್ನಡ ಶಾಲೆಗಳಿಗೆ ಬೀಗ ಹಾಕುವಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಕನ್ನಡ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿಧ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರ ಹಾಗು ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಕನ್ನಡ ಪ್ರಾಧಿಕಾರದವರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುತ್ತಾರಾ ಕಾದು ನೋಡಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *