ಶಿವಮೊಗ್ಗ: ಸಿದ್ದರಾಮಯ್ಯ ಅವರ ಮಗನ ಸಾವಿನ ಬಗ್ಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ನೀಡಿರುವ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ. ಆ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಎಸ್ವೈ, ಸಿದ್ದರಾಮಯ್ಯ ಮಗನ ಸಾವಿನ ಬಗ್ಗೆ ಜನಾರ್ದನ ರೆಡ್ಡಿ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ. ಅವರು ಈ ಬಗ್ಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸುವುದಾಗಿ ತಿಳಿಸಿದರು.

ಸಿದ್ದರಾಮಯ್ಯ ಈಗ ಸಂಯಮ ಕಳೆದುಕೊಂಡು ಮಾತನಾಡುತ್ತಿದ್ದಾರೆ. ಶ್ರೀರಾಮುಲು ಅವರಿಗೆ 371ಜೆ ಗೊತ್ತಿಲ್ಲ, ಅವರಿಗೆ ಕೇವಲ 420 ಮಾತ್ರ ಗೊತ್ತಿದೆ ಎಂದು ಹೇಳಿರುವುದು ಸರಿಯಲ್ಲ. ಶಿವಮೊಗ್ಗದಲ್ಲಿ ನಡೆದ ಜೆಡಿಎಸ್ ಹಾಗೂ ಕಾಂಗ್ರೆಸ್ ಸಭೆಯಲ್ಲಿ ಪ್ರಧಾನಿಯ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ಯಾವುದೇ ಸಭೆ ನಡೆಸಿದರೂ ಅಲ್ಲಿ ಯಡಿಯೂರಪ್ಪ ಅವರನ್ನು ಟೀಕೆ ಮಾಡುವುದೇ ಜೆಡಿಎಸ್ ಹಾಗೂ ಕಾಂಗ್ರೆಸ್ ಕೆಲಸವಾಗಿದೆ ಎಂದು ದೂರಿದರು.
ಉಪ ಚುನಾವಣೆ ಇಡೀ ದೇಶದ ಗಮನ ಸೆಳೆದಿದೆ. ಪ್ರಧಾನಿ ಮೋದಿ ಅವರ ಅಭಿವೃದ್ಧಿ ಕಾರ್ಯಗಳು ಹಾಗೂ ರಾಜ್ಯದ ಮೈತ್ರಿ ಸರ್ಕಾರದ ವೈಫಲ್ಯ ಕುರಿತು ಈ ಚುನಾವಣೆಯಲ್ಲಿ ಚರ್ಚೆಯ ವಿಷಯವಾಗಿದೆ. ರಾಜ್ಯದಲ್ಲಿ 100 ತಾಲೂಕುಗಳಲ್ಲಿ ಭೀಕರ ಬರವಿದ್ದರೂ ನಾಲ್ಕು ತಿಂಗಳಿಂದ ಸಿಎಂ ಕುಮಾರಸ್ವಾಮಿ ಸಾಲಮನ್ನಾ ಸಾಲಮನ್ನಾ ಎಂದು ಜಪಮಾಡುತ್ತಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಿ ಎಂದರೆ ಹಗುರವಾಗಿ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಜನಾರ್ದನ ರೆಡ್ಡಿಯವರು ಸಿದ್ದರಾಮಯ್ಯನವರ ಮಗನ ಸಾವಿನ ವಿಷಯದ ಬಗ್ಗೆ ಆಡಿದ ಮಾತು ನಿಜಕ್ಕೂ ಖಂಡನೀಯ. ಯಾವುದೇ ವ್ಯಕ್ತಿಯ ಸಾವು ಚುನಾವಣಾ ರಾಜಕೀಯವನ್ನು ಮೀರಿ ನಿಲ್ಲಬೇಕು.
ಅದೇ ರೀತಿ ಈ ವಿಚಾರವನ್ನು ಸಿದ್ದರಾಮಯ್ಯನವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿರುವುದು ಅವರ ನೈತಿಕ ದಿವಾಳಿತನವನ್ನು ಎತ್ತಿ ತೋರಿಸುತ್ತದೆ.
— Ravi C T 🇮🇳 ರವಿ ಸಿ ಟಿ (@CTRavi_BJP) October 31, 2018
ಈ ಬಾರಿಯ ಉಪಚುನಾವಣೆಯಲ್ಲಿ ಶಿವಮೊಗ್ಗ, ಬಳ್ಳಾರಿ, ಜಮಖಂಡಿ ಚುನಾವಣೆಯಲ್ಲಿ ಗೆಲ್ಲುತ್ತೇವೆ. ಮಂಡ್ಯ, ರಾಮನಗರ ಗೆದ್ದರೂ ಅಚ್ಚರಿ ಇಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಸಮಾವೇಶ ಮಾಡಿದಾಗ ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ. ಅಲ್ಲದೇ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಿದ್ದು ಇದೇ ಕಾಂಗ್ರೆಸ್, ಜೆಡಿಎಸ್. ಸಿಎಂ ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕದವರು ನನಗೆ ಮತ ಹಾಕಿದ್ದೀರಾ ಎಂದು ಪ್ರಶ್ನಿಸಿ ಅಪಮಾನ ಆಗುವಂತೆ ಮಾಡಿದ್ದರು. ಜೆಡಿಎಸ್ ನವರು ಬಿಜೆಪಿಯ ದಕ್ಷಿಣದ ಬಾಗಿಲು ಮುಚ್ಚುತ್ತೇವೆ ಎನ್ನುತ್ತಾರೆ. ನಿಮ್ಮ ಜೊತೆ ಎಷ್ಟು ಜನ ಸಂಸದರಿದ್ದಾರೆ ಎಂಬುದನ್ನು ಮೊದಲು ಹೇಳಿ ಎಂದು ದೇವೇಗೌಡರಿಗೆ ಸವಾಲು ಎಸೆದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಂದಲೇ ಬಿಜೆಪಿ ಬಾಗಿಲು ಮುಚ್ಚಲು ಆಗಿಲ್ಲ. ಇನ್ನು ಇವರು ಯಾರು? ಮೈತ್ರಿ ಕೂಟಕ್ಕೆ ಸೋಲಿನ ಭಯ ಆರಂಭವಾಗಿದೆ. ನ.6ರ ಫಲಿತಾಂಶದ ಬಳಿಕ ಕಾಂಗ್ರೆಸ್, ಜೆಡಿಎಸ್ ಛಿದ್ರ ಛಿದ್ರವಾಗುತ್ತವೆ. ಸಮ್ಮಿಶ್ರ ಸರ್ಕಾರದ ತುಘಲಕ್ ದರ್ಬಾರ್ ಅಂತ್ಯವಾಗಲಿದೆ. ಈ ಹಿಂದೆ ಲಾಲ್ ಕೃಷ್ಣ ಅಡ್ವಾಣಿ ಅವರು ನನಗೆ ಜೆಡಿಎಸ್ ಮೈತ್ರಿ ಬೇಡ ಎಂದು ಹೇಳಿದ್ದರು. ಸಮ್ಮಿಶ್ರ ಸರ್ಕಾರ ರಚಿಸಿದರೆ ನೀವು ಮೊದಲು ಅಧಿಕಾರ ನಡೆಸಿ ಎಂದು ಹೇಳಿದ್ದರು. ಅಂದು ನಾನು ಅವರೊಂದಿಗೆ ಹೋಗಿದ್ದರೆ ಇಂದು ಬಿಜೆಪಿ ಇರುತ್ತಿರಲಿಲ್ಲ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ನನ್ನ ಮಗನ ಸಾವು ನನಗೆ ದೇವರುಕೊಟ್ಟ ಶಿಕ್ಷೆ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ. ನಿಮ್ಮ ಪಾಪಗಳಿಗಾಗಿ ಶಿಕ್ಷೆಯನ್ನು ನಿಮ್ಮ ಮಕ್ಕಳಿಗೆ ದೇವರು ನೀಡದಿರಲಿ ಎಂದು ದೇವರನ್ನು ಬೇಡಿಕೊಳ್ಳುತ್ತೇನೆ.@INCKarnataka
— Siddaramaiah (@siddaramaiah) October 30, 2018

Leave a Reply