ಶಿವಮೊಗ್ಗ: ಬಿಜೆಪಿಯವರಿಗೆ ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದೆಯಾ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಪ್ರಶ್ನಿಸಿದ್ದಾರೆ.
ಲೋಕಸಭಾ ಉಪ ಚುನಾವಣೆಯಲ್ಲಿ ಸಾಗರದಲ್ಲಿ ಬಹಿರಂಗ ಪ್ರಚಾರ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪನವರೇ ಇನ್ನೊಂದು 20 ದಿನ ಸಮಾಧಾನವಾಗಿರಿ. ಹೇಗೆ ನಮ್ಮ ರೈತರ ಸಾಲ ಮನ್ನಾ ಆಗಿದೆ ಅನ್ನೋದು ನಿಮಗೇ ಗೊತ್ತಾಗುತ್ತೆ. ನವೆಂಬರ್ 20ರ ನಂತರ ಬೃಹತ್ ಸಮಾವೇಶ ನಡೆಸಿ, ಸಾಲಮನ್ನಾ ಋಣಮುಕ್ತ ಪತ್ರಗಳನ್ನು ರೈತರಿಗೆ ನೀಡುತ್ತೇವೆ ಎಂದು ಹೇಳಿದರು.

ಬಿಎಸ್‍ವೈ ಅವರಿಗೆ ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದ್ದಿದ್ದರೆ, ದೆಹಲಿಗೆ ಹೋಗಿ ಪ್ರಧಾನಿ ಮೋದಿ ಹತ್ತಿರ ಸಾಲಮನ್ನಾ ಮಾಡಿ ಅಂತ ಕೇಳಿಕೊಳ್ಳಿ. ಬಿಜೆಪಿಯವರಿಗೆ ರೈತ ಬಗ್ಗೆ ಕಾಳಜಿ ಇದೆಯಾ ಎಂದು ಪ್ರಶ್ನಿಸಿದ ಅವರು, ಯಡಿಯೂರಪ್ಪ ಇಲ್ಲಿ ಉದ್ದುದ್ದ ಭಾಷಣ ಮಾಡುತ್ತಾರೆ. ಆದರೆ ಪ್ರಧಾನಿ ಮೋದಿ ಎದುರಿಗೆ ಹೋದರೆ, ಇವರಿಗೆ ಉಸಿರೇ ಇರಲ್ಲ. ಇವರ ಕಥೆಯನ್ನು ನಾನು ನೋಡಿದ್ದೇನೆ. ಇವರು ತಮ್ಮ ನೈತಿಕತೆಯನ್ನು ಉಳಿಸಿಕೊಂಡಿಲ್ಲವೆಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಪ್ರವಾಹದಿಂದ ಉಂಟಾದ ಅತಿವೃಷ್ಟಿಯಿಂದಾಗಿ, ಕೇಂದ್ರದ ಬಳಿ ಎಲ್ಲಾ ಪಕ್ಷದ ಮುಖಂಡರು ಪ್ರಧಾನಿ ನರೇಂದ್ರ ಮೋದಿಯವರ ಬಳಿ ಹೋಗಿ ಪರಿಹಾರ ನೀಡುವಂತೆ ತೆರಳುವ ಬಗ್ಗೆ ಬಿಎಸ್‍ವೈ ಸೇರಿದಂತೆ ಇತರೆ ನಾಯಕರಿಗೆ ಪತ್ರ ಬರೆದಿದ್ದೆ. ಆದರೆ ಯಾವೊಬ್ಬ ಬಿಜೆಪಿ ನಾಯಕರು ನಮ್ಮ ನಿಯೋಗದ ಜೊತೆ ಬರಲಿಲ್ಲ. ಇವರಿಗೆ ರಾಜ್ಯದ ಜನರ ಹಿತಕ್ಕಿಂತ, ಅವರ ಅಧಿಕಾರವೇ ಮುಖ್ಯವಾಯಿತು ಎಂದು ಕಿಡಿಕಾರಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply