ಬೆಂಗಳೂರು: ನಟ ಚೇತನ್ ವಿರುದ್ಧ ಅರ್ಜುನ್ ಸರ್ಜಾ ಅವರ ಮ್ಯಾನೇಜರ್ ಶಿವಾರ್ಜುನ್ ದೂರು ದಾಖಲಿಸಿದ್ದಾರೆ.
ಶಿವಾರ್ಜುನ್ ಅವರು ಫಿಲಂ ಚೇಂಬರ್ ಗೆ ನಟ ಚೇತನ್ ವಿರುದ್ಧ ದೂರು ನೀಡಿದ್ದಾರೆ. ಚೇತನ್ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಅಭಿನಯದ ‘ಪ್ರೇಮಬರಹ’ ಚಿತ್ರಕ್ಕೆ 10 ಲಕ್ಷ ರೂ. ಮುಂಗಡವಾಗಿ ಪಡೆದಿದ್ದರು.
ಈಗ ಮುಂಗಡ ಹಣವನ್ನ ವಾಪಸ್ ಕೊಡದೇ ಚೇತನ್ ಸತಾಯಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅರ್ಜುನ್ ಸರ್ಜಾ ಅವರ ಮ್ಯಾನೇಜರ್ ಶಿವಾರ್ಜುನ್ ಈ ಹಣವನ್ನ ವಾಪಸ್ ಕೊಡಿಸುವಂತೆ ಫಿಲಂ ಚೇಂಬರ್ ಗೆ ದೂರು ಸಲ್ಲಿಸಿದ್ದಾರೆ.

ಆರೋಪ ಏನು?
2018 ರಲ್ಲಿ ಅರ್ಜುನ್ ಸರ್ಜಾ ಅವರ ಮಗಳ ಅಭಿನಯದ ಸಿನಿಮಾವಾದ `ಪ್ರೇಮಬರಹ’ ರಿಲೀಸ್ ಆಗಿತ್ತು. 2017ರಲ್ಲಿ ನಾಯಕ ನಟನಿಗಾಗಿ ಚಿತ್ರ ತಂಡ ಹುಡುಕಾಟ ನಡೆಸುತಿತ್ತು. ಆಗ ಚೇತನ್ ಆಡಿಷನ್ ನಡೆದಿತ್ತು. ಈ ಸಮಯದಲ್ಲಿ ಆರ್ಥಿಕ ಸಮಸ್ಯೆ ಇದೆ ಎಂದು ಹೇಳಿ ಮುಂಗಡವಾಗಿ ಹಣ ನೀಡಿ ಎಂದು ಚೇತನ್ ಕೇಳಿಕೊಂಡಿದ್ದರು. ಹೀಗಾಗಿ ಅರ್ಜುನ್ ಸರ್ಜಾ ಅವರು 10 ಲಕ್ಷ ರೂ. ನೀಡಿದ್ದರು. ಆದರೆ ಚಿತ್ರೀಕರಣ ವೇಳೆ ಚೇತನ್ ಗೆ ಡೈಲಾಗ್ ಸರಿಯಾಗಿ ಹೇಳುವುದಕ್ಕೆ ಬಾರದ ಕಾರಣ ಅವರನ್ನು ಕೈಬಿಡಲಾಗಿತ್ತು.

ಮುಂಗಡ ಹಣವನ್ನು ನೀಡುವಂತೆ ಅರ್ಜುನ್ ಸರ್ಜಾ ಕೇಳಿದ್ದರೂ ಚೇತನ್ ಹಣ ಮರು ಪಾವತಿ ಮಾಡಿರಲಿಲ್ಲ. ಹೀಗಾಗಿ 10 ಲಕ್ಷ ರೂ. ವಾಪಸ್ ಕೊಡುವಂತೆ ಲೀಗಲ್ ನೋಟಿಸ್ ಕೂಡ ರವಾನೆ ಮಾಡಲಾಗಿತ್ತು. ಈ ನೋಟಿಸ್ ಗೆ ಪ್ರತೀಕಾರವಾಗಿ ಈಗ ಸೇಡು ತೀರಿಸಿಕೊಳ್ಳಲು 10 ಲಕ್ಷ ರೂ. ಹಣಕ್ಕಾಗಿ ನಟ ಅರ್ಜುನ್ ಸರ್ಜಾ ವಿರುದ್ಧ ಚೇತನ್ ನಿಂತಿದ್ದಾರೆ ಎಂದು ಅರ್ಜುನ್ ಸರ್ಜಾ ಸ್ನೇಹಿತ ಪ್ರಶಾಂತ್ ಸಂಬರ್ಗಿ ಅವರು ಆರೋಪಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply