ರಾಮನಗರ: ಕಳೆದ ಬಾರಿ ಅಧಿಕಾರದಲ್ಲಿದ್ದಾಗ ಗ್ರಾಮವಾಸ್ತವ್ಯ ಮಾಡುತ್ತಿದ್ದ ಸಿಎಂ ಎಚ್ಡಿಕೆ, ಇವತ್ತು ಗಂಡ ಹೆಂಡತಿ ಇಬ್ಬರು ಫೈವ್ ಸ್ಟಾರ್ ಹೋಟೆಲ್ನಲ್ಲಿ ಜೀವನ ಮಾಡುತ್ತಿದ್ದಾರೆ. ಚುನಾವಣೆ ಬಂದ ಕೂಡಲೇ ಎಮೋಷನಲ್ ಬ್ಲಾಕ್ಮೇಲ್ ಮಾಡಿ ಜನರನ್ನ ಮೋಸ ಮಾಡುತ್ತಾರೆ ಎಂದು ಬಿಜೆಪಿ ಮುಖಂಡ, ಮಾಜಿ ಶಾಸಕ ಸಿಪಿ ಯೋಗೇಶ್ವರ್ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಆರೋಪ ಮಾಡಿದ್ದಾರೆ.
ಉಪಚುನಾವಣೆ ಮತದಾನದ ದಿನಾಂಕ ಹತ್ತಿರವಾಗುತ್ತಿದಂತೆ ರಾಜಕೀಯ ನಾಯಕರ ಆರೋಪ, ಪ್ರತ್ಯಾರೋಪಗಳ ಹೆಚ್ಚಾಗುತ್ತಿದ್ದು, ಇಂದು ಸಿಪಿ ಯೋಗೇಶ್ವರ್ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ರಾಮನಗರ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಕೈಲಾಂಚ ಹೋಬಳಿಯಲ್ಲಿ ಪ್ರಚಾರ ನಡೆಸಿದ ಅವರು ಮಾಧ್ಯಮಗಳೊಂದಿಗೆ ಮಾತುನಾಡಿದರು. ಸಿಎಂ ಕುಮಾರಸ್ವಾಮಿ ಅವರು ತಾಜ್ ವೆಸ್ಟೆಂಡ್ ಹೋಟೆಲ್ಗೆ ದಿನಕ್ಕೆ ಲಕ್ಷ ಬಾಡಿಗೆ ಕೊಡುತ್ತಿದ್ದು, ಗಂಡ ಹೆಂಡತಿ ಇಬ್ಬರು ಫೈವ್ ಸ್ಟಾರ್ ಹೋಟೆಲ್ನಲ್ಲಿ ಜೀವನ ಮಾಡುತ್ತಿದ್ದಾರೆ. ಜಂತಕಲ್ ಮೈನಿಂಗ್ ಹಗರಣದ ಕತ್ತಿ ಅವರ ಮೇಲೆ ತೂಗಾಡುತ್ತಿದೆ. ಕಳೆದ 20 ವರ್ಷಗಳಿಂದ ಕಾಂಗ್ರೆಸ್ನವರು, ಜೆಡಿಎಸ್ನವರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದು, ಅದನ್ನು ಬಿಟ್ಟು ನ್ಯಾಯಾಲಯದಲ್ಲಿ ಚಾಲೆಂಜ್ ಮಾಡಲಿ ಎಂದು ಸವಾಲು ಎಸೆದರು.

ಇದೇ ವೇಳೆ ಅನಿತಾ ಕುಮಾರಸ್ವಾಮಿಯವರು ಬಹಿರಂಗವಾಗಿ ಈ ತಾಲೂಕಿನ ಅಧಿಕಾರಿಗಳ ಬಳಿ ಹಣ ವಸೂಲಿ ಮಾಡಿದ್ದಾರೆ. ಅದರ ದಾಖಲೆಗಳು ನನ್ನ ಬಳಿ ಇದೆ. ಸಿಎಂ ಎಚ್ಡಿಕೆ ನಮ್ಮನ್ನ ಮೋಸಗಾರ ಎಂದು, ಅವರನ್ನ ಸತ್ಯ ಹರಿಶ್ಚಂದ್ರ ಎಂದುಕೊಂಡಿದ್ದಾರೆ. ಕುಮಾರಸ್ವಾಮಿಯವರು ಎಲ್ಲೂ ಹೋಗಿ ಕೆಲಸ ಮಾಡಿದ್ದು, ಉದ್ಯೋಗ ಮಾಡಿದ್ದು ನಾವು ನೋಡಿಲ್ಲ. ಆದರೆ ಅವರ ಆಸ್ತಿಯೆಲ್ಲಾ ನೂರಾರು ಕೋಟಿ, ಸಾವಿರಾರು ಕೋಟಿ ಜಾಸ್ತಿಯಾಗುತ್ತಿದೆ. ಅಲ್ಲದೇ ಅನಿತಾ ಕುಮಾರಸ್ವಾಮಿ ಅವರು ಆಸ್ತಿಯೂ ಹೇಗೆ ಜಾಸ್ತಿಯಾಗುತ್ತದೆ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿಯವರು ಮುಖವಾಡ ಹಾಕಿಕೊಂಡು ರಾಜಕೀಯ ಮಾಡುತ್ತಿದ್ದು, ಚುನಾವಣೆ ಬಂದ ತಕ್ಷಣ ಸಾಯುವ ಮಾತನಾಡುವ ಮೂಲಕ ಡ್ರಾಮಾ ಮಾಡುತ್ತಿದ್ದಾರೆ. ಇಂತಹ ಎಮೋಷನಲ್ ಬ್ಲಾಕ್ಮೇಲ್ ಬಿಡಿ, ಜನರನ್ನ ಎಷ್ಟ ಸಲ ಮೋಸ ಮಾಡುತ್ತೀರಿ. ಕರ್ನಾಟಕದ ಕಣ್ಣೊರೆಸ್ತೀನಿ ಎನ್ನುವ ಸಿಎಂ ಕುಮಾರಸ್ವಾಮಿಯವರು ಮೊದಲು ರಾಮನಗರದ ಜನರ ಕಣ್ಣೀರು ಒರೆಸಬೇಕು ಎಂದು ಸಲಹೆ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv


Leave a Reply