ಉಡುಪಿ: 15 ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ಪೊಲೀಸರು ವಶಪಡಿಸಿಕೊಂಡಿದ್ದ ಸುಮಾರು 18 ಕೆ.ಜಿ. ಗಾಂಜಾವನ್ನು ಎಸ್‍ಪಿ ಕಚೇರಿಯ ಆವರಣದಲ್ಲಿ ಸುಟ್ಟುಹಾಕಲಾಯಿತು.
ಉಡುಪಿ ನಗರ ಸೇರಿದಂತೆ ಮಣಿಪಾಲ, ಹಿರಿಯಡ್ಕ, ಕಾರ್ಕಳ ಹಾಗೂ ಕುಂದಾಪುರ ಉಪ-ವಿಭಾಗ ಪೊಲೀಸರು ಸುಮಾರು 15 ಪ್ರಕರಣಗಳಲ್ಲಿ 18 ಕೆ.ಜಿ.ಯಷ್ಟು ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇದರಲ್ಲಿ ಅತಿಹೆಚ್ಚು ಉಡುಪಿ ನಗರದಲ್ಲೇ ವಶಕ್ಕೆ ಪಡೆಯಲಾಗಿತ್ತು.

ಜಿಲ್ಲಾ ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಇಂದು ಜಿಲ್ಲಾವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳ ಸಮಕ್ಷಮದಲ್ಲಿ ಎಸ್ಪಿ ಕಚೇರಿಯ ಆವರಣದಲ್ಲೇ ಗಾಂಜಾವನ್ನು ಬೆಂಕಿ ಹಚ್ಚಿ ನಾಶಪಡಿಸಿದ್ದಾರೆ. ಸುಮಾರು 70 ಲಕ್ಷ ಮೌಲ್ಯದ 18 ಕೆ.ಜಿ. ತೂಕದ ಗಾಂಜಾ ಸೊಪ್ಪನ್ನು ನಾಶಪಡಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎಸ್ಪಿ ಲಕ್ಷ್ಮಣ ನಿಂಬರ್ಗಿ, ವಿದ್ಯಾರ್ಥಿಗಳು ಗಾಂಜಾ ಸಂಕೋಲೆಗೆ ಸುಲಭವಾಗಿ ತುತ್ತಾಗುತ್ತಿದ್ದಾರೆ. ಜೊತೆಗಿರುವ ಗೆಳೆಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ, ಅಪರಾಧ ತಪ್ಪಿಸುವುದರ ಜೊತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡಬಹುದು. ಗಾಂಜಾ ಎಂಬ ವಿದೇಶಿ ಕಪಿಮುಷ್ಟಿಗೆ ಭಾರತದ ಯುವ ಪೀಳಿಗೆ ತುತ್ತಾದರೆ, ದೇಶಕ್ಕೆ ನಷ್ಟವೆಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply