ಅರ್ಜುನ್ ಸರ್ಜಾ ಬಳಿ ದುಡ್ಡು, ಹೆಸರಿದೆ- ಶೃತಿ ಹರಿಹರನ್ ಬೆನ್ನಿಗೆ ನಿಂತ ಸಂಯುಕ್ತಾ ಹೆಗ್ಡೆ

ಬೆಂಗಳೂರು: ಮೀ ಟೂ ಅಭಿಯಾನ ಶುರುವಾದ ಮೇಲೆ ಸ್ಯಾಂಡಲ್‍ವುಡ್ ನಟಿಯರೂ ಸಿಡಿದೆದ್ದಿದ್ದಾರೆ. ನಟ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ್ದ ಶೃತಿ ಹರಿಹರನ್ ಬೆನ್ನಿಗೆ ಶ್ರದ್ಧಾ ಶ್ರೀನಾಥ್ ಹಾಗೂ ರಾಗಿಣಿ ದ್ವಿವೇದಿ ನಿಂತ ಬೆನ್ನಲ್ಲೇ ಇದೀಗ ಮತ್ತೊಬ್ಬ ನಟಿ ಸಂಯುಕ್ತಾ ಹೆಗ್ಡೆ ಕೂಡ ಅವರಿಗೆ ಸಾಥ್ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಂಯುಕ್ತಾ ಹೆಗ್ಡೆ, ಅರ್ಜುನ್ ಸರ್ಜಾಗೆ ಒಳ್ಳೆಯ ಹೆಸರಿನ ಜೊತೆ ಹಣ ಇದೆ. ಆದ್ದರಿಂದ ಅವರಿಗೆ ಜನರು ಬೆಂಬಲ ಕೊಡುತ್ತಾರೆ. ಹಾಗಂದ ಮಾತ್ರಕ್ಕೆ ಕೀಳು ಮಟ್ಟದ ವರ್ತನೆ ತೋರಲು ಯಾರು ಅಧಿಕಾರ ಕೊಟ್ಟವರು ಅಂತ ಕಿಡಿಕಾರಿದ್ದಾರೆ.

ನಟಿಯರು ತಮಗಾದ ನೋವನ್ನು ಹಂಚಿಕೊಂಡರೆ ಬೇರೆಯವರು ಟೀಕೆ ಮಾಡುತ್ತಾರೆ. ನಮಗಂತೂ ನಟರಷ್ಟು ಸಂಬಳ ಕೊಡಲ್ಲ. ದಯವಿಟ್ಟು ಕನಿಷ್ಠ ಗೌರವವನ್ನಾದರೂ ಕೊಡಿ. ನಾವೇನಾದರೂ ಮಾತನಾಡಿದರೆ ಬೇರೆ ನಟಿಯರನ್ನು ಇಂಡಸ್ಟ್ರಿಗೆ ತರುತ್ತಾರೆ. ನಿಮ್ಮ ಮನೆ ಹಣ್ಮಕ್ಕಳಿಗೆ ಹೀಗಾಗಿದ್ದರೆ ಸುಮ್ಮನಿರುತ್ತೀರಾ ಅಂತ ಕಿರಿಕ್ ನಟಿ ಸಂಯುಕ್ತಾ ಹೆಗ್ಡೆ ಪ್ರಶ್ನಿಸಿದ್ದಾರೆ.

ಇತ್ತ ನಟಿ ರಾಗಿಣಿ ಕೂಡ ಶೃತಿ ಹರಿಹರನ್ ಬೆನ್ನಿಗೆ ನಿಂತಿದ್ದು, ಮೀಟೂ ಅಭಿಯಾನದಿಂದ ಸಮಸ್ಯೆ ಹೇಳಿಕೊಳ್ಳುವುದು ಒಳ್ಳೆಯ ವಿಷಯ. ಅದನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಆದರೆ ಶೃತಿ ಹರಿಹರನ್ ಒಳ್ಳೆ ಹುಡುಗಿ, ಅನಗತ್ಯವಾಗಿ ಹೇಳಿಕೊಳ್ಳಲ್ಲ. ಶೃತಿ ಅವರಿಗೆ ನಿಜವಾಗಿ ಅಂತಹ ಘಟನೆ ನಡೆದಿದ್ದರೆ ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಮೀಟೂ ಅಭಿಯಾನವನ್ನು ಯಾರು ಕೂಡ ಸ್ವಾರ್ಥಕ್ಕೆ ಬಳಸುವುದು ಸರಿಯಲ್ಲ ಎಂದು ತಿಳಿಸಿದ ರಾಗಿಣಿ, ಪ್ರತಿ ದಿನ ಈ ಅಭಿಯಾನ ಹೆಚ್ಚಾಗುತ್ತಿದೆ. ಇದು ಕೇವಲ ಹುಡುಗಿಯರಿಗೆ ಮಾತ್ರವಲ್ಲ, ಹುಡುಗರಿಗೂ ಅನ್ವಯವಾಗುತ್ತದೆ. ಈ ಅಭಿಯಾನ ಆಗುತ್ತಿರುವುದು ನನಗೆ ಸಂತಸ ತಂದಿದೆ. ನಾನು ಮೀಟೂ ಪರವಾಗಿ ನಿಲ್ಲುತ್ತೇನೆ ಎಂದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *