ತಪ್ಪೊಪ್ಪಿಕೊಂಡ ಡಿಕೆಶಿ ಹೇಳಿಕೆ ಸ್ವಾಗತಾರ್ಹ: ಶ್ರೀಶೈಲ ಜಗದ್ಗುರು

ಬೆಳಗಾವಿ: ಲಿಂಗಾಯತ ಧರ್ಮ ಹೋರಾಟ ಮಾಡಿದ್ದು ತಪ್ಪು ಎಂದು ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿಕೆ ನೀಡಿರುವುದು ಸ್ವಾಗತಾರ್ಹ ಎಂದು ಪಂಚ ಪೀಠದ ಶ್ರೀಶೈಲ ಜಗದ್ಗುರು ಶ್ರೀ ಹೇಳಿದ್ದಾರೆ.

ಹುಕ್ಕೇರಿ ಪಟ್ಟಣದ ಹಿರೇಮಠದ ದಸರಾ ಉತ್ಸವದಲ್ಲಿ ಮಾತನಾಡಿದ ಶ್ರೀಗಳು, ಧರ್ಮವನ್ನ ಇಬ್ಭಾಗ ಮಾಡುವ ಪ್ರಯತ್ನ ಹಿಂದಿನ ದಿನಮಾನಗಳಲ್ಲಿ ಒಂದು ಪಕ್ಷ ಮಾಡಿತ್ತು. ಆದರೆ ಇಂದು ಆ ತಪ್ಪನ್ನ ಒಪ್ಪಿಕೊಂಡಿರುವುದು ಸ್ವಾಗತಾರ್ಹ. ವೀರಶೈವ ಲಿಂಗಾಯತ ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿದರೆ ಕೆಟ್ಟ ಪ್ರತಿಫಲ ಅನುಭವಿಸುತ್ತೇವೆ ಎನ್ನುವ ಸಂದೇಶ ಅವರಿಗೆ ಸಿಕ್ಕದೆ ಎಂದು ತಿಳಿಸಿದರು.

ಸಚಿವ ಡಿಕೆ ಶಿವಕುಮಾರ್ ಅವರು ನಮ್ಮಿಂದ ತಪ್ಪಾಗಿದೆ ಎಂದು ಹೇಳಿದ್ದಾರೆ. ಈಗಲಾದರು ಅವರಿಗೆ ತಪ್ಪು ಅರ್ಥವಾಗಿದ್ದು ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಯಾವುದೇ ಪಕ್ಷ ಧರ್ಮದ ವಿಷಯಕ್ಕೆ ಕೈ ಹಾಕಬಾರದು. ಧರ್ಮ ಒಡೆಯಲು ಸಿದ್ದರಾಮಯ್ಯ ಮುಂದಾದಾಗ ಧರ್ಮ ಒಡೆಯಬೇಡಿ ಎಂದು ತಿಳಿಸಿ ಹೇಳಿದರೂ ಹಠ ತೊಟ್ಟು ಧರ್ಮ ಒಡೆಯುವ ಕಾರ್ಯಕ್ಕೆ ಮುಂದಾದರು. ಇಂದು ಅದರ ಕೆಟ್ಟ ಪ್ರತಿಫಲವನ್ನ ಸಿದ್ದರಾಮಯ್ಯ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಕತ್ತಿ ತಿರುಗೇಟು: ಇದೇ ವೇಳೆ ಮಾತನಾಡಿದ ಬಿಜೆಪಿ ಶಾಸಕ ಉಮೇಶ್ ಕತ್ತಿ ಡಿಕೆ ಶಿವುಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದು, ಡಿಕೆ ಶಿವುಕುಮಾರ್ ಒಕ್ಕಲಿಗನೂ ಅಲ್ಲ, ಲಿಂಗಾಯತನೂ ಅಲ್ಲ. ಒಬ್ಬ ಒಳ್ಳೆಯ ರಾಜಕಾರಣಿ. ಅವರ ಬಾಯಲ್ಲಿ ಯಾವಾಗ ಏನು ಬರುತ್ತೆ ಏನೋ ತಿಳಿಯುತ್ತೆ ಹಾಗೆ ರಾಜಕಾರಣ ಮಾಡುತ್ತಾರೆ. ಕಾಂಗ್ರೆಸಿಗರು ವೀರಶೈವ ಲಿಂಗಾಯತ ಮಹಾಸಭಾದ ಕ್ಷಮೆ ಕೇಳಿ ಬಳಿಕ ಮಾತನಾಡಬೇಕು. ಮುಂದಿನ ದಿನಗಳಲ್ಲಿ ಯಾವುದೇ ಪಕ್ಷ ಧರ್ಮದ ವಿಷಯದಲ್ಲಿ ಕೈ ಹಾಕಬಾರದು ಎಂದು ಅವರು ಕಿವಿಮಾತು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *