ಅರಣ್ಯಾಧಿಕಾರಿಗಳಿಂದಲೇ ಬರದ ನಾಡನ್ನು ಹಸಿರಾಗಿಸಬೇಕಿದ್ದ ಸಸಿಗಳ ಮಾರಣಹೋಮ!

– ಅಧಿಕಾರಿಗಳ ವಿರುದ್ಧ ಪರಿಸರವಾದಿಗಳಿಂದ ಭ್ರಷ್ಟಾಚಾರದ ಆರೋಪ
– ಎಡವಟ್ಟು ಮುಚ್ಚಲು ಸಸಿಗಳ ಮಾರಣಹೋಮ

ಚಿತ್ರದುರ್ಗ: ಬರದ ನಾಡನ್ನು ಹಚ್ಚ ಹಸಿರಾಗಿ ಕಂಗೊಳಿಸುವಂತೆ ಮಾಡಬೇಕಿದ್ದ ಅರಣ್ಯಧಿಕಾರಿಗಳೇ ಸಸಿಗಳ ಮಾರಣ ಹೋಮ ಮಾಡಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಐನಳ್ಳಿ ನರ್ಸರಿಯಲ್ಲಿ ಬೆಳಕಿಗೆ ಬಂದಿದೆ.

ಕಳೆದ ವರ್ಷ ಸಾಮಾಜಿಕ ವಲಯದ ವ್ಯಾಪ್ತಿಗೆ ಬರುವ ರಸ್ತೆಗಳು, ಸಾರ್ವಜನಿಕ ಉದ್ಯಾನವನಗಳಲ್ಲಿ ನೆಡಲೆಂದು ನರ್ಸರಿಯಲ್ಲಿ 5 ಸಾವಿರ ಗಿಡಗಳಿಗೆ ನೀರು, ಗೊಬ್ಬರ ಹಾಕಿ ಪೋಷಿಸಿದ್ದರು. ಆದರೆ ಚಿತ್ರದುರ್ಗ ವಲಯ ಅಧಿಕಾರಿ ಅಕ್ಷತಾ, ಈ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದ್ದು, ತಮ್ಮ ವ್ಯಾಪ್ತಿಯೊಳಗೆ ಬಂದಿದ್ದ ವಿವಿಧ ಬಗೆಯ ಸುಮಾರು 5 ಸಾವಿರ ಸಸಿಗಳನ್ನು ನಾಶ ಪಡಿಸಿದ್ದಾರೆ. ಅಲ್ಲದೇ ಉತ್ತಮವಾಗಿ ಪೋಷಿಸಿದ್ದ ಸಸಿಗಳನ್ನು ಅಗತ್ಯವಿರುವ ಕಡೆ ನೆಡುವುದು ಇರಲಿ ಸಾರ್ವಜನಿಕರಿಗೂ ಸಹ ನೀಡದೇ ಆ ಸಸಿಗಳನ್ನು ನಾಶಗೊಳಿಸಿದ್ದಾರೆ. ಸದ್ಯ ಅರಣ್ಯ ಇಲಾಖೆಯ ಅಧಿಕಾರಿಗಳ ನಡೆಗೆ ಪರಿಸರವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಸಿ ಮಾರಣಹೋಮ ಮಾಡಿದ್ದೇಕೆ?
ಸದ್ಯ ನರ್ಸರಿಯಲ್ಲಿ ಸಸಿಗಳ ಸಂಗ್ರವಾಗಿದ್ದರೂ ಕೂಡ ಮತ್ತೆ ಈ ವರ್ಷದ ಮಳೆಗಾಲಕ್ಕೆ ಹೊಸ ಸಸಿಗಳ ಅಗತ್ಯವಿದೆಯೆಂದು ಇಲಾಖೆಗೆ ಮನವಿ ಸಲ್ಲಿಸಿದೆ. ಹೊಸ ಸಸಿಗಳನ್ನು ಪೂರೈಕೆ ಮಾಡಲು ಮೇಲಾಧಿಕಾರಿಗಳು ಸ್ಥಳ ಪರಿಶೀಲನೆ ಬರುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳ ಕಣ್ಣಿಗೆ ತಮ್ಮ ಎಡವಟ್ಟು ಕಾಣಿಸದಂತೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿ ವಲಯ ಅರಣ್ಯಾಧಿಕಾರಿಗಳು ಹೀಗೆ ಸಸಿಗಳ ಮಾರಣಹೋಮ ಮಾಡಿದ್ದರೆಂಬ ಆರೋಪ ಕೇಳಿಬಂದಿದೆ.

ಭ್ರಷ್ಟಚಾರದ ವಾಸನೆ?
ಸಸಿಗಳನ್ನು ಮಾರಣ ಹೋಮ ನಡೆಸಿರುವುದರ ಹಿಂದೆ ದೊಡ್ಡ ಭ್ರಷ್ಟಾಚಾರದ ವಾಸನೆ ಕೇಳಿಬಂದಿದ್ದು, ಅರಣ್ಯ ಇಲಾಖೆಗೆ ಸುಮಾರು 2ಲಕ್ಷ ರೂ. ನಷ್ಟವುಂಟಾಗಿದೆ. ಪ್ರತಿವರ್ಷವೂ ಹೀಗೆಯೇ ಸಸಿಗಳ ಮಾರಣಹೋಮ ನಡೆಸಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.

ತನಿಖೆ ಅಗತ್ಯ: ಸಾವಿರಾರು ಸಸಿಗಳನ್ನು ಹೀಗೆ ನಾಶ ಮಾಡಿರುವ ಅರಣ್ಯ ಇಲಾಖೆ ಇದೂವರೆಗೂ ಸಾಮಾಜಿಕ ವಲಯದಲ್ಲಿ ನೆಟ್ಟಿರುವ ಸಸಿಗಳ ಪೋಷಣೆ ಕುರಿತು ಸೂಕ್ತ ತನಿಖೆಯಾಗಬೇಕು. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟಕ್ಕೆ ಬ್ರೇಕ್ ಹಾಕಬೇಕು. ಜೊತೆಗೆ ಸಸಿಗಳು ಚಿಗುರುವ ಮುನ್ನವೇ ನಾಶ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪರಿಸರವಾದಿಗಳು ಬೇಡಿಕೆ ಇಟ್ಟಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *