ಇವತ್ತೇ ನಾರಿಯರಿಗೆ ಮಣಿಕಂಠನ ದರ್ಶನ ಸಿಗುತ್ತಾ – ಅಯ್ಯಪ್ಪನ ಊರಲ್ಲಿ ಗಲಾಟೆ ಜೋರು

ತಿರುವನಂತಪುರ: ಇಂದು ಸಂಜೆ 5 ಗಂಟೆ ವೇಳೆಗೆ ದೇವಾಲಯದ ಬಾಗಿಲು ತೆರೆಯಲಿರುವ ಹಿನ್ನೆಲೆಯಲ್ಲಿ ಕೇರಳಾದ್ಯಂತ ಅಯ್ಯಪ್ಪಸ್ವಾಮಿ ಉಳಿಸಿ ಆಂದೋಲನ ಜೋರಾಗಿದೆ.

ಸುಪ್ರೀಂ ಕೋರ್ಟ್ ಪ್ರವೇಶಕ್ಕೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಯಾವೊಬ್ಬ ಮಹಿಳೆಯರು ದೇವಾಲಯಕ್ಕೆ ತೆರಳದಂತೆ ಭಕ್ತರು ಹಾಗೂ ಮಹಿಳಾ ಹೋರಾಟಗಾರರು ಸ್ಥಳದಲ್ಲಿ ಅಡ್ಡಗಟ್ಟಿ ಪ್ರತಿ ವಾಹನವನ್ನು ಪರಿಶೀಲನೆ ನಡೆಸಿ ಮುಂದಕ್ಕೆ ಬಿಡುತ್ತಿದ್ದಾರೆ. ದೇವಾಲಯದ ಆಡಳಿತ ಮಂಡಳಿಕಾರ್ಯಕರ್ತರು, ಭಕ್ತರು ದೇವಾಲಯದ ಬೆಟ್ಟದ ಕೆಳಭಾಗದ ಅಂದರೆ ದೇವಾಲಯದಿಂದ 20 ಕಿಮೀ ದೂರದ ನಿಳಕ್ಕಲ್ ಬಳಿಯೇ ವಾಹನಗಳನ್ನು ತಡೆಯುತ್ತಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿರುವ ಭಕ್ತರು ಸ್ಥಳದಲ್ಲಿ ಭದ್ರಕೋಟೆ ನಿರ್ಮಿಸಿದ್ದಾರೆ. ಪ್ರತಿಭಟನೆ ನಡೆಸುತ್ತಿರುವವರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಮಂಗಳವಾರ ತಿರುವಾಂಕೂರು ಆಡಳಿತ ಮಂಡಳಿ, ಪಂದಳಂ ರಾಜಮನೆತನ ಹಾಗೂ ಸರ್ಕಾರ ನಡುವೆ ಏರ್ಪಡಿಸಿದ್ದ ಸಂಧಾನ ಸಭೆಯೂ ವಿಫಲವಾಗಿದೆ. ಪೊಲೀಸರು ನಡೆಸಬೇಕಾದ ಕಾರ್ಯವನ್ನು ಕಾರ್ಯಕರ್ತರು ಕೈಗೆತ್ತುಕೊಂಡಿದ್ದು ದೇವಾಲಯ ಪ್ರದೇಶದಲ್ಲಿ ಹೈ ಆಲರ್ಟ್ ಘೋಷಣೆ ಮಾಡಲಾಗಿದೆ.

ಈ ನಡುವೆ ವಿವಾದ ಕುರಿತು ಪ್ರತಿಕ್ರಿಯೆ ನೀಡಿರುವ ಪತ್ತನಂತಿಟ್ಟಂ ಕ್ಷೇತ್ರದ ಸಂಸದ ಆಂಟೋ ಆ್ಯಂಟನಿ ಅವರು, ಸರ್ಕಾರ ಸುಗ್ರೀವಾಜ್ಞೆ ಜಾರಿ ಮಾಡಿ ಕೋರ್ಟ್ ತೀರ್ಪು ಜಾರಿಗೆ ಅವಕಾಶ ನೀಡಬೇಕು ಎಂದು ತಿಳಿಸಿದ್ದಾರೆ. ದೇವಾಲಯದ ಪ್ರದೇಶದಲ್ಲಿ ಶಾಂತಿ ಕಾಪಾಡಲಿ ಸರ್ಕಾರ ಕೂಡ ಕ್ರಮಕೈಗೊಂಡಿದ್ದು ಜಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನೇಮಕ ಮಾಡಿ ಪ್ರದೇಶವನ್ನು ವಶಕ್ಕೆ ಪಡೆದಿದೆ.

ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ವಿಚಾರವಾದಿ ಪ್ರೋ ಭಗವಾನ್, ದೇವಾಲಯ ಪ್ರವೇಶಕ್ಕೆ ತಡೆ ನೀಡಿರುವುದು ಅವೈಜ್ಞಾನಿಕ ನಡೆ. ಮಹಿಳೆಯರಿಗೆ ತಡೆ ನೀಡಿರುವುದು ಕಂದಚಾರ ಆಚರಣೆ ಪ್ರತಿರೂಪ. ಮಹಿಳೆಯಲ್ಲಿ ನಡೆಯುವ ಕ್ರೀಯೆ ಪ್ರಕೃತಿಯ ವರ. ಆದರೆ ಈ ಕಾರಣದಿಂದ ಪ್ರವೇಶ ನಿರಾಕರಿಸಬಾರದು. ಮಹಿಳೆಯರೇ ಅಲ್ಲಿ ಪ್ರತಿಭಟನೆ ನಡೆಸುತ್ತಿರುವುದು ವಿಷಾದನೀಯ. ಆಡಳಿತ ಮಂಡಳಿ ಹಾಗೂ ರಾಜಮನೆತನ ನಡೆ ಕೂಡ ಅವರ ಮೌಢ್ಯವನ್ನು ಬೆಳೆಸುತ್ತಿದೆ. ಆದರೆ ಕೇರಳ ಸರ್ಕಾರ ಸುಪ್ರೀಂ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸದೇ ಇರುವುದು ಉತ್ತಮ ನಡೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ದೇವಾಲಯಕ್ಕೆ ಮಹಿಳೆಯರ ಪ್ರವೇಶ ನಿರಾಕರಣೆ ಮಾಡಿರುವುದು ವೈಜ್ಞಾನಿಕ ಕಾರಣಕ್ಕೂ ಆಗಿರಬಹುದು, ಏಕೆಂದರೆ ದೇವದಾಸಿ ಪದ್ಧತಿ ಜಾರಿ ಇದ್ದ ವೇಳೆ ಅಂತಹ ಘಟನೆಗಳು ಅಲ್ಲಿ ನಡೆಯಬಾರದು ಎಂಬ ಕಾರಣದಿಂದಲೂ ನಿಷೇಧ ಮಾಡಿರಬಹುದು. ಆದರೆ ಇಂದು ಸಂವಿಧಾನ ಎಲ್ಲಾ ಜನರಿಗೂ ಸಮಾನತೆ ಹಕ್ಕು ನೀಡಿದೆ. ಅದ್ದರಿಂದ ಮಹಿಳೆಯ ಪ್ರವೇಶಕ್ಕೆ ತಡೆ ನೀಡಬಾರದು ಎಂದು ತಿಳಿಸಿದರು.

ತುಲಾ ಮಾಸದ ಆರಂಭದ ಕಾರಣ ಇಂದಿನಿಂದ 6 ದಿನಗಳ ಕಾಲ ದೇವಾಲಯ ತೆರೆಯಲಾಗುತ್ತದೆ, 6 ದಿನಗಳ ಕಾಲ ನಡೆಯುವ ವಿಶೇಷ ಪೂಜೆಯ ಬಳಿಕ ಮತ್ತೆ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ. ಪತ್ರಕರ್ತೆಯೊಬ್ಬರು ಕಾರಿನಲ್ಲಿ ತೆರಳಲು ಯತ್ನಿಸಿದ ವೇಳೆ ಮಹಿಳಾ ಪ್ರತಿಭಟನಕಾರರೇ ಕಾರಿನ ಗಾಜನ್ನು ಧ್ವಂಸಗೊಳಿಸಿದ್ದಾರೆ. ಈ ವೇಳೆ ಕೆಲ ಕಾಲ ಸ್ಥಳದಲ್ಲಿ ಅಂತಕದ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೇ ಮಹಿಳೆಯರು ದೇವಾಲಯ ಪ್ರವೇಶ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಶಿವಸೇನೆಯ ಮಹಿಳಾ ಕಾರ್ಯಕರ್ತೆಯರು ಬೆದರಿಕೆ ಹಾಕಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *