ಚಿಕ್ಕಬಳ್ಳಾಪುರ: ಶ್ರೀರಾಮ ದೇವಾಲಯ ನಿರ್ಮಾಣಕ್ಕೆ ಕಾಣಿಕೆಯಾಗಿ ಕೊಟ್ಟಿದ್ದ ಇಟ್ಟಿಗೆಗಳನ್ನ ಬಿಜೆಪಿ ಮುಖಂಡನೊಬ್ಬ ವಾಪಸ್ ತೆಗೆದುಕೊಂಡು ಹೋಗಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪರಗೋಡು ಗ್ರಾಮದಲ್ಲಿ ನಡೆದಿದೆ.
ಬೆಂಗಳೂರು ಮೂಲದ ಅರಿಕೆರೆ ಕೃಷ್ಣಾರೆಡ್ಡಿ ಇಟ್ಟಿಗೆಗಳನ್ನು ವಾಪಸ್ ತೆಗೆದುಕೊಂಡು ಹೋಗಿರುವ ಬಿಜೆಪಿ ಮುಖಂಡ. ಕೃಷ್ಣಾರೆಡ್ಡಿ ಎಂಬವರು ಸಮಾಜಸೇವೆ ಹೆಸರಲ್ಲಿ ಸಾರ್ವಜನಿಕರಿಗೆ ಸಾಕಷ್ಟು ಕೊಡುಗೆ-ಕಾಣಿಕೆಗಳನ್ನ ನೀಡಿದ್ದರು. ಅಂತೆಯೇ ಪರಗೋಡು ಗ್ರಾಮದ ಶ್ರೀರಾಮ ದೇವಾಲಯ ನಿರ್ಮಾಣಕ್ಕೆ ಅಂತ 10,000 ಮಣ್ಣಿನ ಇಟ್ಟಿಗೆಯನ್ನ ಕಾಣಿಕೆ ನೀಡಿದ್ದರು.

ಇವರು ಕಳೆದ ವಿಧಾನಸಭಾ ಚುನಾವಣೆ ವೇಳೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಮುಂದಾಗಿದ್ದರು. ಆದರೆ ಅರಿಕರೆ ಕೃಷ್ಣಾರೆಡ್ಡಿಗೆ ಬಿಜೆಪಿ ಪಕ್ಷ ಮಣೆ ಹಾಕದೆ ಕೊನೆ ಕ್ಷಣದಲ್ಲಿ ನಟ ಸಾಯಿಕುಮಾರ್ ಗೆ ಟಕೆಟ್ ಘೋಷಣೆ ಮಾಡಿತ್ತು. ಹೀಗಾಗಿ ಅಂದು ಶ್ರೀರಾಮ ದೇವಾಲಯದ ನಿರ್ಮಾಣಕ್ಕೆ ಅಂತ ಕೊಟ್ಟಿದ್ದ ಇಟ್ಟಿಗೆಯನ್ನ ವಾಪಸ್ ತೆಗೆದುಕೊಂಡು ಹೋಗಲು ಅರಿಕೆರೆ ಕೃಷ್ಣಾರೆಡ್ಡಿ ಮುಂದಾಗಿದ್ದಾರೆ.
ಗ್ರಾಮಕ್ಕೆ ಟ್ರ್ಯಾಕ್ಟರ್ ಸಮೇತ ಬಂದು 5,000 ದಷ್ಟು ಇಟ್ಟಿಗೆ ಸಹ ತೆಗೆದುಕೊಂಡು ಹೋಗಿದ್ದಾರೆ. ನನಗೆ ಇಟ್ಟಿಗೆ ಅವಶ್ಯಕತೆಯಿದ್ದು, ಎಲ್ಲೂ ಇಟ್ಟಿಗೆ ಸಿಗದ ಕಾರಣ ಈ ಇಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದೇನೆ ಪುನಃ ಕೊಡಿಸುತ್ತೀನಿ ಅಂತ ಗ್ರಾಮಸ್ಥರ ಬಳಿ ಸಮಜಾಯಿಷಿ ನೀಡಿದ್ದಾರೆ.

ಅರಿಕೆರೆ ಕೃಷ್ಣಾರೆಡ್ಡಿಯ ಈ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿರುವ ಗ್ರಾಮಸ್ಥರು ಅವರ ವಿರುದ್ಧ ಹರಿಹಾಯ್ದಿದ್ದಾರೆ. ಅರಿಕೆರೆ ಕೃಷ್ಣಾರೆಡ್ಡಿಗೆ ಮನಸ್ಸೋ ಇಚ್ಛೆ ಬೈದು ಗ್ರಾಮದಿಂದ ಹೊರಕಳುಹಿಸಿದ್ದಾರೆ. ಜೊತೆಗೆ ಇನ್ನೂ ಅಳಿದುಳಿದ ಇಟ್ಟಿಗೆಗಳನ್ನ ಒಡೆದು ಹಾಕಿ ತಮ್ಮ ಆಕ್ರೋಶವನ್ನ ಗ್ರಾಮಸ್ಥರು ಹೊರಹಾಕಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply