ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಸಿಸಿಟಿವಿ ಕ್ಯಾಮೆರಾ ಲೆಕ್ಕಿಸದೆ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಇತಂಹದ್ದೇ ಘಟನೆಯೊಂದು ಇದೇ ತಿಂಗಳ 8ರಂದು ತಡರಾತ್ರಿ ನಡೆದಿದ್ದು, ಮನೆಯಲ್ಲಿದ್ದ ಮಹಿಳೆಯೊಬ್ಬರ ಜಾಗೃತಿಯಿಂದ ಕಳ್ಳರು ಕೃತ್ಯ ಎಸಗಲು ವಿಫಲರಾಗಿ ಕಾಲ್ಕಿತ್ತಿದ್ದಾರೆ.
ಬೆಂಗಳೂರಿನ ಹೊರವಲಯದ ಬೇಗೂರು ಬಳಿಯ ದೇವರಾಜ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ದೇವರಾಜ್ ಅವರ ಪತ್ನಿ ರೂಪಾ ಎಚ್ಚರವಿದ್ದರಿಂದ ಮನೆಯಲ್ಲಿದ್ದ ನಾಲ್ವರು ಬಚಾವ್ ಆಗಿದ್ದಾರೆ. ಆರು ಜನ ಕಳ್ಳರು ಈ ಕೃತ್ಯದಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ?:
ಮನೆಯೊಂದಕ್ಕೆ ಬಂದ ಆರು ಜನರ ಕಳ್ಳರ ತಂಡವೊಂದು ತಡರಾತ್ರಿ 3ಗಂಟೆಗೆ ನುಗ್ಗಿ, ಬಾಗಿಲು ಮುರಿಯಲು ಯತ್ನಿಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಮಹಿಳೆ ರೂಪಾರಿಗೆ ಎಚ್ಚರವಾಗಿ, ಅನುಮಾನ ವ್ಯಕ್ತಪಡಿಸಿ ಬಾಗಿಲ ಬಳಿ ಬಂದಿದ್ದಾರೆ. ಪಿಸು ಮಾತು, ಬಾಗಿಲನ್ನು ಕೊರೆಯುವ ಶಬ್ದ ಕೇಳಿಸಿಕೊಂಡಿದ್ದಾರೆ. ಒಳಗಿದ್ದೇ ಕಳ್ಳರನ್ನು ಬೆದರಿಸಲು ರೂಪಾ ಅವರು 10 ನಿಮಿಷ ಪ್ರಯತ್ನಿಸಿದ್ದಾರೆ. ಆದರೆ ಅವರು ಯಾವುದಕ್ಕೂ ಜಗ್ಗಲಿಲ್ಲ.
ಭಯಗೊಂಡ ರೂಪಾ ಅವರು 6-7 ಬಾರಿ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ಬಳಿಕ ಕರೆ ಸ್ವೀಕರಿಸಿದ ಪೊಲೀಸರು ಹೊಯ್ಸಳ ವಾಹನದಲ್ಲಿ ಸ್ಥಳಕ್ಕೆ ಬಂದಿದ್ದಾರೆ. ವಾಹನ ಶಬ್ಧ ಕೇಳಿದ ದರೋಡೆಕೋರರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಹೀಗಾಗಿ ಮಹಿಳೆಯ ಜಾಗೃತಿಯಿಂದ ಮನೆಯಲ್ಲಿದ್ದ ನಾಲ್ವರು ಬಚಾವ್ ಆಗಿದ್ದಾರೆ.
ಈ ಕುರಿತು ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply