ಮೈಸೂರು: ನಾನು ನೆಮ್ಮದಿ, ಸಂತೋಷದಿಂದ ಸಿಎಂ ಪಟ್ಟ ಅನುಭವಿಸುತ್ತಿದ್ದೇನೆ ಅಂದುಕೊಳ್ಳಬೇಡಿ ಎಂದು ಹೇಳುವ ಮೂಲಕ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮತ್ತೊಮ್ಮೆ ಸಮ್ಮಿಶ್ರ ಸರ್ಕಾರದ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.
ಮೈಸೂರು ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಮೂಲತಃ ರಾಜಕಾರಣಿಯೇ ಅಲ್ಲ. ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದು, ಆಕಸ್ಮಿಕವಾಗಿಯೇ ಎರಡು ಬಾರಿ ಸಿಎಂ ಆಗಿದ್ದೇನೆ. ಆದರೆ ನಿಮ್ಮ ಕಷ್ಟ ಪರಿಹರಿಸಲು ಶ್ರಮಿಸುತ್ತಿದ್ದೇನೆ. ಸರ್ಕಾರದ ಮೇಲೆ ನಂಬಿಕೆ ಇಡಿ ಎಂದು ಜನತೆಗೆ ಮನವಿ ಮಾಡಿಕೊಂಡರು.

ಚುನಾವಣಾ ಆಯೋಗದ ನೀತಿ ಸಂಹಿತೆಯಿಂದಾಗಿ ನಾನು ವೇದಿಕೆಯಲ್ಲಿ ಭಾಷಣ ಮಾಡಲು ಆಗುತ್ತದೆಯೋ, ಇಲ್ಲವೋ ಎಂಬ ಅನುಮಾನ ಇತ್ತು ಎಂದ ಅವರು, ರೈತರೇ ಕೈ ಜೋಡಿಸಿ ಮನವಿ ಮಾಡಿಕೊಳ್ಳುತ್ತೇನೆ ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ನಮ್ಮಲ್ಲಿ ಪ್ರಾಮಾಣಿಕತೆ ಇದೆ. ನಿಮ್ಮ ರಕ್ಷಣೆಗೆ ಈ ಸರ್ಕಾರ ಇರುವುದು. ಆತ್ಮಹತ್ಯೆ ಮಾಡಿಕೊಂಡು ನಿಮ್ಮ ಕುಟುಂಬವನ್ನು ಅನಾಥ ಮಾಡಬೇಡಿ ಎಂದು ರೈತರಲ್ಲಿ ಕೇಳಿಕೊಂಡರು.

ಇನ್ಫೋಸ್ಸಿಸ್ ನಾರಾಯಣಮೂರ್ತಿ ಅವರ ಪತ್ನಿ ಸುಧಾಮೂರ್ತಿ ಅವರು ತಾಯಿ ಹೃದಯದ ಮಹಿಳೆ. ಅವರಿಂದ ನಾಡದೇವಿಗೆ ಪೂಜೆ ಸಲ್ಲಿಸಿದರೆ, ರಾಜ್ಯದ ಎಲ್ಲಾ ಸಮಸ್ಯೆ ಬಗೆಹರಿಯುತ್ತವೆ ಎನ್ನುವ ನಂಬಿಕೆ ನನ್ನದು. ಕರ್ನಾಟಕ ಜನ ಸುಭಿಕ್ಷವಾಗಿ ಬದುಕುವ ವಾತಾವರಣ ಕಲ್ಪಿಸು ಅಂತಾ ಅವರು ಚಾಮುಂಡಿ ದೇವಿಯಲ್ಲಿ ಬೇಡಿದ್ದಾಗಿ, ನನಗೆ ವಿವರಿಸಿದ್ದಾರೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv


Leave a Reply