ಮಡಿಕೇರಿ: ಖಾಸಗಿ ಬಸ್ ಡಿಕ್ಕಿಯಿಂದ ಸೊಂಟ ಮುರಿತಕ್ಕೊಳಗಾಗಿದ್ದ ದಸರಾ ಆನೆ ಮೃತಪಟ್ಟಿದೆ. ಈ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ನಾಗರಹೋಳೆ ಅಭಯಾರಣ್ಯದ ಮತ್ತಿಗೋಡು ಆನೆ ಶಿಬಿರದ ರಸ್ತೆಯಲ್ಲಿ ಸಂಭವಿಸಿತ್ತು.
ನಲವತ್ತೈದು ವರ್ಷ ಪ್ರಾಯದ ಸಾಕಾನೆಯಾದ ರಂಗನನ್ನು ಎಂದಿನಂತೆ ರಾತ್ರಿ ತಿರಾಗಾಡಲು ಬಿಟ್ಟಿದ್ದರು. ಈ ವೇಳೆ ಕಣ್ಣನ್ನೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸು ಸಾಕಾನೆ ಗುದ್ದಿದೆ. ಪರಿಣಾಮ ಆನೆಯ ಸೊಂಟ ಮುರಿದು ಸ್ಥಳದಲ್ಲೇ ಕುಸಿದು ಬಿದ್ದಿತ್ತು. ರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿತ್ತು.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಮಾವುತರು ಹಾಗೂ ಪುಶುವೈದ್ಯ ಡಾ.ಮುಜೀಬ್ ಸಹಾಯದಿಂದ ಆನೆಗೆ ಚಿಕಿತ್ಸೆ ನೀಡಿತಾದರೂ, ಗಂಭೀರವಾಗಿ ಪೆಟ್ಟು ತಿಂದಿದ್ದ ಆನೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದೆ.
ಕಳೆದ ಮೂರು ವರ್ಷಗಳ ಹಿಂದೆ ಬೆಂಗಳೂರಿನ ಹೊರವಲಯದಲ್ಲಿ ರೌಡಿ ರಂಗನೆಂದೇ ಖ್ಯಾತಿ ಪಡೆದಿದ್ದ ಈ ಆನೆಯನ್ನು ಸೆರೆ ಹಿಡಿದು, ಮತ್ತಿಗೋಡು ಆನೆ ಶಿಬಿರದಲ್ಲಿ ಪಳಗಿಸಲಾಗಿತ್ತು.
ಘಟನೆ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply