ಅರಬ್ಬೀಸಮುದ್ರದಲ್ಲಿ ವಾಯುಭಾರ ಕುಸಿತ- ಕರಾವಳಿಯಲ್ಲಿ ಇನ್ನೆರಡು ದಿನ ಭಾರೀ ಮಳೆ

– ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಸೂಚನೆ

ಮಂಗಳೂರು/ಉಡುಪಿ: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತಗೊಂಡಿರುವ ಹಿನ್ನೆಲೆ ಇಂದಿನಿಂದ ಕರಾವಳಿಯಲ್ಲಿ ಭಾರೀ ಮಳೆಯಾಗಲಿದೆ. ಈಗಾಗಲೇ ಮೀನುಗಾರರಿಗೆ ಕಡಲಿಗಿಳಿಯದಂತೆ ಸೂಚಿಸಲಾಗಿದೆ. ಜಿಲ್ಲಾಡಳಿತ ಎಚ್ಚರದಿಂದಿರುವಂತೆ ಸೂಚಿಸಲಾಗಿದೆ. ಇತ್ತ ರಾಜ್ಯದ ಹಲವೆಡೆ ಮಳೆಯಾಗಿದೆ.

ಕಳೆದ ತಿಂಗಳು ಸುರಿದ ಭಾರೀ ಮಳೆಗೆ ದಕ್ಷಿಣ ಕರ್ನಾಟಕ ತತ್ತರಿಸಿತ್ತು. ಇಂದಿನಿಂದ ಕರಾವಳಿಯಲ್ಲಿ ಭಾರೀ ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ಎಚ್ಚರಿಸಿದೆ. ಇತ್ತ ಹವಾಮಾನ ಎಚ್ಚರಿಕೆ ನಡುವೆಯೇ ಕರಾವಳಿಯಲ್ಲಿ ಗುಡುಗು ಸಹಿತ ಮಳೆಯಾಗಿದೆ. ಇನ್ನು ಅರಬ್ಬೀ ಸಮುದ್ರ ಪಕ್ಷಕ್ಷುಬ್ಧಗೊಳ್ಳಲಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ 5 ದಿನ ರೆಡ್ ಅಲರ್ಟ್ ಘೋಷಿಸಲಾಗಿದೆ. ಆಳಸಮುದ್ರ ಮೀನುಗಾರಿಕೆಗೆ ತೆರಳಿದ ಬೋಟ್‍ಗಳನ್ನು ದಡಕ್ಕೆ ಕರೆಸಿಕೊಳ್ಳಲಾಗಿದೆ. ಮೀನುಗಾರರಿಗೆ ಮೈಕ್ ಮೂಲಕ ಸೂಚನೆ ನೀಡಲಾಗಿದ್ದು, ಬೋಟ್‍ಗಳೆಲ್ಲ ಬಂದರಿನಲ್ಲೇ ಲಂಗರು ಹಾಕಿದೆ.

ಇನ್ನೆರಡು ದಿನದಲ್ಲಿ ವರ್ಷಧಾರೆಯಾಗಲಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆಗಳಲ್ಲಿ ಹಿಂಗಾರು ಮಳೆ 140ರಿಂದ 180 ಮಿಲಿ ಮೀಟರ್ ಮಳೆಯಾಗಲಿದೆ ಅಂತ ರಾಜ್ಯ ಪ್ರಕೃತಿ ಪ್ರಕೋಪ ಇಲಾಖೆ ನಿರ್ದೇಶಕ ಶ್ರೀನಿವಾಸರೆಡ್ಡಿ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಳೆಯಾಗ್ತಿದ್ದು, ಕಸ್ಕೆಮನೆ ಗ್ರಾಮದ ದೇವದಾನ ಎಸ್ಟೇಟ್‍ನಲ್ಲಿ ಬಳ್ಳಾರಿ ಮೂಲದ ಕಾರ್ಮಿಕ ಶಿವಪ್ಪ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಮಂಡ್ಯದಲ್ಲಿ ಬಿರುಗಾಳಿ ಸಹಿತ ಮಳೆಗೆ ಮರಗಳು ಬಿದ್ದು ನಾಲ್ಕು ಕಾರುಗಳ ಗಾಜು ಪುಡಿಪುಡಿಯಾಗಿದೆ. ಬಯಲುಸೀಮೆ ಕೋಲಾರ, ಚಿಕ್ಕಬಳ್ಳಾಪುರದಲ್ಲೂ ಮಳೆಯಾಯ್ತು. ಮಳೆಯಿಂದ ರೈತರಲ್ಲಿ ಸಂತಸ ಮೂಡಿದೆ. ಇತ್ತ ಬೆಂಗಳೂರು ಸುತ್ತಮುತ್ತಲಿನ ಆನೇಕಲ್, ಎಲೆಕ್ಟ್ರಾನಿಕ್ಸ್ ಸಿಟಿ, ಬನ್ನೇರುಘಟ್ಟ ರಸ್ತೆ ಮತ್ತು ಕೆ.ಆರ್.ಪುರಂ ಭಾಗಗಳಲ್ಲಿ ಮಳೆಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *