ಮಂಡ್ಯ: ಎತ್ತಿನ ಗಾಡಿ ಸಮೇತ ಕೆರೆಗೆ ಬಿದ್ದ ಕರುಗಳನ್ನು ರಕ್ಷಿಸಿದ ತಂದೆ ಮತ್ತು ಮಗ ಇಬ್ಬರೂ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಮನಕಲಕುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಾಡ್ಲಿ ಗ್ರಾಮದಲ್ಲಿ ನಡೆದಿದೆ.
45 ವರ್ಷದ ಶಿವಣ್ಣ ಮತ್ತು 17 ವರ್ಷದ ಚಂದನ್ ಮೃತ ದುರ್ದೈವಿಗಳು. ಕರುಗಳಿಗೆ ಎತ್ತಿನ ಗಾಡಿ ಅಭ್ಯಾಸ ಮಾಡಿಸುವ ಸಲುವಾಗಿ ತಂದೆ ಮಗ ಜಮೀನಿನ ಕಡೆ ಹೊರಟಿದ್ದರು. ಈ ವೇಳೆ ಕೆರೆಯ ಬಳಿ ಬಂದಾಗ ಹೆದರಿದ ಎತ್ತಿನ ಕರುಗಳು, ನೇರ ಕೆರೆಗೆ ನುಗ್ಗಿವೆ.

ಕರುಗಳು ಕೆರೆಯ ಕಡೆ ನುಗ್ಗುತ್ತಿದ್ದಂತೆಯೇ ಆತಂಕಗೊಂಡ ಶಿವಣ್ಣ ಮತ್ತು ಚಂದನ್ ಗಾಡಿಯ ಜೊತೆ ಎತ್ತುಗಳು ಸಾವನ್ನಪ್ಪಬಹುದು ಎಂಬ ಭಯದಿಂದ ಗಾಡಿಯಿಂದ ಎತ್ತುಗಳನ್ನು ಬಿಡಿಸಿ ರಕ್ಷಣೆ ಮಾಡಿದ್ದಾರೆ. ಆದರೆ ತಕ್ಷಣ ಇಬ್ಬರಿಗೂ ಮೇಲೆ ಬರಲು ಆಗದೇ ತಂದೆ ಮಗ ಇಬ್ಬರೂ ಒಟ್ಟಿಗೆ ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಘಟನೆಯಿಂದಾಗಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಘಟನೆ ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಂದೆ ಮತ್ತು ಮಗನ ಸಾವಿನಿಂದ ಹಾಡ್ಲಿ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply