ಸಿಸಿಬಿಯಿಂದ ಮತ್ತೆ ಮುಂದುವರಿದ ರೇಡ್- ರಾತ್ರಿ ನಗರದ 40 ಬಾರ್ ಗಳ ಮೇಲೆ ದಾಳಿ

– 102 ಮಂದಿಯನ್ನ ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾತ್ರಿ ಸಿಸಿಬಿ ಪೊಲೀಸರು ಮತ್ತೆ ಬೃಹತ್ ದಾಳಿ ನಡೆಸಿದ್ದಾರೆ. ನಗರದ ಸುಮಾರು 40 ಬಾರ್ ಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

5 ಎಸಿಪಿ, 20 ಇನ್ಸ್ ಪೆಕ್ಟರ್ ಮತ್ತು 70 ಸಿಬ್ಬಂದಿ ದಾಳಿ ನಡೆಸಿದ್ದಾರೆ. ಸಿಸಿಬಿ ದಾಳಿ ನಡೆಸುವ ವೇಳೆ 102 ಜನರನ್ನು ವಶಕ್ಕೆ ಪಡೆದಿದ್ದಾರೆ. ಹೆಣ್ಣೂರು ಸೇರಿದಂತೆ ಬೆಂಗಳೂರಿನ 40 ಪ್ರದೇಶದಲ್ಲಿ ದಾಳಿ ನಡೆಸಿದ್ದಾರೆ.

ಕಳೆದ ವಾರ ತಡರಾತ್ರಿ ಸಿಸಿಬಿ ಪೊಲೀಸರು ಅನಧಿಕೃತ ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ್ದರು. ನಗರದ ಮೆಜೆಸ್ಟಿಕ್, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಇಂದಿರಾನಗರದಲ್ಲಿ ದಾಳಿ ನಡೆಸಿದ್ದರು. ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಒಟ್ಟು 100ಕ್ಕೂ ಹೆಚ್ಚು ಸಿಸಿಬಿ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿದ್ದರು.

ಒಟ್ಟು 20ಕ್ಕೂ ಹೆಚ್ಚು ಕಡೆ ನಡೆದ ದಾಳಿಯಲ್ಲಿ ಕೆಲವೆಡೆ ಯುವತಿಯರನ್ನು ಅಕ್ರಮವಾಗಿ ಕೂಡಿಟ್ಟುಕೊಂಡು ಬಾರ್ ಗರ್ಲ್ಸ್ ಆಗಿ ಕೆಲಸ ಮಾಡಿಸುತ್ತಿರುವುದು ಕಂಡು ಬಂದಿತ್ತು. ದಾಳಿ ವೇಳೆ ಅಕ್ರಮವಾಗಿ ಪಬ್ ಗಳನ್ನು ನಡೆಸುತ್ತಿರುವುದು ಗೊತ್ತಾಗಿದೆ. ಅಲ್ಲದೇ ಪಬ್ ಗಳ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಶಂಕೆ ಹಿನ್ನೆಲೆಯಲ್ಲಿ ಆಯಾ ಪಬ್ ಗಳ ಸಿಬ್ಬಂದಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗಿತ್ತು.

ಕೆಲ ಯುವತಿಯರನ್ನು ರಕ್ಷಿಸಿ ಅವರಿಂದಲೂ ಸಿಸಿಬಿ ಪೊಲೀಸರು ಹೇಳಿಕೆ ಪಡೆದಿದ್ದರು. ಅಕ್ರಮವೆಸಗಿದ ಆಯಾ ಪಬ್ ಗಳು ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Comments

Leave a Reply

Your email address will not be published. Required fields are marked *