`ನನ್ನ ಎಲ್ಲ ಬೇಡಿಕೆಯನ್ನು ಆದಿತ್ಯನಾಥ್ ಒಪ್ಪಿಕೊಂಡಿದ್ದಾರೆ’- ಖಾಕಿಗಳ ಗುಂಡೇಟಿಗೆ ಬಲಿಯಾದ ಆಪಲ್ ಸಿಬ್ಬಂದಿಯ ಪತ್ನಿ

ಲಕ್ನೋ: ಪೊಲೀಸರ ಗುಂಡಿಗೆ ಬಲಿಯಾಗಿದ್ದ ಆ್ಯಪಲ್ ಕಂಪನಿ ಸೇಲ್ಸ್ ಮಾನೇಜರ್ ವಿವೇಕ್ ತಿವಾರಿ ಕುಟುಂಬಕ್ಕೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು 35 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸಕ್ಕೆ ಇಂದು ವಿವೇಕ್ ತಿವಾರಿ ಪತ್ನಿ ಕಲ್ಪನಾ ತಿವಾರಿ ಭೇಟಿ ನೀಡಿದ್ದರು. ಅವರ ಜೊತೆಗೆ 25 ನಿಮಿಷಗಳ ಕಾಲ ಮಾತುಕತೆ ನಡೆಸಿ, ಅಳಲು ಕೇಳಿದ ಸಿಎಂ ಆದಿತ್ಯನಾಥ್ ಅವರು, ಮಕ್ಕಳ ಶಿಕ್ಷಣ, ಕುಟುಂಬ ನಿರ್ವಹಣೆಗೆ ಉದ್ಯೋಗ, ವಿವೇಕ್ ತಾಯಿಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

ಎಷ್ಟು ಪರಿಹಾರ?
ಮೃತ ವಿವೇಕ್ ತಿವಾರಿ ಕುಟುಂಬಕ್ಕೆ ಒಟ್ಟು 35 ಲಕ್ಷ ರೂ. ಪರಿಹಾರ ನೀಡಲು ಸಿಎಂ ಯೋಗಿ ಆದಿತ್ಯನಾಥ್ ನಿರ್ಧರಿಸಿದ್ದಾರೆ. ಅದರಲ್ಲಿ 25 ಲಕ್ಷ ರೂ. ಕುಟುಂಬ ನಿರ್ವಹಣೆಗೆ, 5 ಲಕ್ಷ ರೂ. ಮಕ್ಕಳ ಶಿಕ್ಷಣಕ್ಕೆ ಹಾಗೂ 5 ಲಕ್ಷ ರೂ. ವಯಸ್ಸಾಗಿರುವ ವಿವೇಕ್ ತಾಯಿಗೆ ನೀಡಲು ಮುಂದಾಗಿದ್ದಾರೆ.

ಸಿಎಂ ಭೇಟಿ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಕಲ್ಪನಾ ತಿವಾರಿ ಅವರು, ಯೋಗಿ ಆದಿತ್ಯವಾಥ್ ಅವರು ನನ್ನ ಸಮಸ್ಯೆಯನ್ನು ಆಲಿಸಿದರು. ಮುಂದಿನ ಜೀವನ ನಡೆಸಲು ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಅವರ ಮೇಲೆ ನನಗೆ ವಿಶ್ವಾಸವಿದೆ. ನನ್ನ ಎಲ್ಲ ಬೇಡಿಕೆಯನ್ನು ಈಡೇರಿಸುವುದಾಗಿ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.

ಮಾಯಾವತಿ ಕಿಡಿ: ಉತ್ತರ ಪ್ರದೇಶದಲ್ಲಿ ಕಾನೂನು ವ್ಯವಸ್ಥೆ ಹಾಳಾಗಿದೆ. ರಾಜ್ಯದ ಜನತೆ ಆತಂಕದ ವಾತಾವರಣದಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಆರೋಪಿಸಿದ್ದಾರೆ. ವಿವೇಕ್ ತಿವಾರಿ ಕೊಲೆಯ ಆರೋಪಿ ಪೊಲೀಸ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ನಂತರ ಮೃತರ ಕುಟುಂಬ ಭೇಟಿ ಆಗಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *