ಚಾಲಕನ ಮೊಬೈಲ್ ಮೋಹಕ್ಕೆ 20 ಕುರಿಗಳು ಸ್ಥಳದಲ್ಲೇ ಸಾವು!

ಚಿಕ್ಕೋಡಿ: ಚಾಲಕನೊಬ್ಬ ಮೊಬೈಲ್‍ನಲ್ಲಿ ಮಾತನಾಡುತ್ತ ವಾಹನ ಚಾಲನೆ ಮಾಡಿದ್ದು, ಕುರಿಗಳ ಮೇಲೆ ಹತ್ತಿಸಿದ್ದ ಪರಿಣಾಮ 20 ಕುರಿಗಳು ಸ್ಥಳದಲ್ಲಿಯೇ ದುರ್ಮರಣ ಹೊಂದಿದ ಘಟನೆ ಅಥಣಿ ತಾಲೂಕಿನಲ್ಲಿ ನಡೆದಿದೆ.

ಚಾಲಕ ಪವನ್ ಬಿರಾದಾರ್ ಕಟಗೇರಿ ಗ್ರಾಮದ ಭಜಂತ್ರಿ ಬಡಾವಣೆಯ ಬಳಿ ಕುರಿಗಳ ಮೇಲೆ ಮ್ಯಾಕ್ಸ್ ಪಿಕಪ್ ಅನ್ನು ಹತ್ತಿಸಿದ್ದಾನೆ. ಪರಿಣಾಮ ಕಟಗೇರಿ ಗ್ರಾಮದ ಸಿದ್ದಪ್ಪ ಬಾಳಪ್ಪ ಚಮಕೇರಿ ಮತ್ತು ಮುರೆಪ್ಪ ಬಾಳಪ್ಪ ಚಮಕೇರಿ ಎಂಬವರಿಗೆ ಸೇರಿದ ಒಟ್ಟು 20 ಕುರಿಗಳು ಮೃತಪಟ್ಟಿವೆ.

ಹೆಸ್ಕಾಂ ಕೆಲಸಗಾರರನ್ನು ಕರೆದೊಯ್ಯಲು ಇಂದು ಮ್ಯಾಕ್ಸ್ ಪಿಕಪ್ ವಾಹನ ತೆಗೆದುಕೊಂಡು ಪವನ್ ಬಿರಾದಾರ್ ಬಂದಿದ್ದ. ಈ ವೇಳೆ ಮೊಬೈಲ್‍ನಲ್ಲಿ ಮಾತನಾಡುತ್ತ ವಾಹನ ಓಡಿಸಿದ್ದಾನೆ. ದಾರಿಯಲ್ಲಿ ಕುರಿಗಳು ಇರುವುದನ್ನು ಗಮನಿಸದೇ ಅವುಗಳ ಮೇಲೆ ಹಾಯಿಸಿದ್ದಾನೆ. ಇದು ತನ್ನ ಗಮನಕ್ಕೆ ಬರುತ್ತಿದ್ದಂತೆ ಭಯಗೊಂಡ ಪವನ್ ಅಲ್ಲಿಯೇ ವಾಹನ ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣವೇ ಗ್ರಾಮಸ್ಥರು ಪವನ್‍ನನ್ನು ತಡೆದು ಅಥಣಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕೆಲ ಕುರಿಗಳ ಹೊಟ್ಟೆಯ ಮೇಲೆಯೇ ವಾಹನ ಹರಿದು ಸ್ಥಳದಲ್ಲಿಯೇ ಮೃತಪಟ್ಟಿವೆ. ಕೆಲವು ಕುರಿಗಳು ಗಂಭೀರವಾಗಿ ಗಾಯಗೊಂಡಿದ್ದು, ಅವುಗಳನ್ನು ಬದುಕಿಸಲು ಮಾಲೀಕರು ಪರದಾಡುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *