ಹುಬ್ಬಳ್ಳಿ: ಆಸ್ತಿ ವಿಚಾರ ಸಂಬಂಧ ಬಿಜೆಪಿ ಮುಖಂಡನಿಂದ ಹಲ್ಲೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕುಂದಗೋಳ ಪಟ್ಟಣದಲ್ಲಿ ನಡೆದಿದೆ.
ಕುಂದಗೋಳದ ನಿವಾಸಿಯಾದ ಬಿಜೆಪಿ ಮುಖಂಡ ದೇವರಾಜ್ ದಾನಪ್ಪ ಪಾಯಕ್ನವರ್ ಹಾಗೂ ಆತನ ಮಕ್ಕಳು ಸೇರಿಕೊಂಡು ಯಮನಪ್ಪ ಪಾಯಕ್ನವರ್ ಮೇಲೆ ನಾಲ್ಕು ದಿನಗಳ ಹಿಂದೆ ಹಲ್ಲೆ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ.
ಆಸ್ತಿಗಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ನೊಂದ ಯಮನಪ್ಪ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಘಟನೆಗೆ ಸಂಬಂಧಪಟ್ಟಂತೆ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ?
ಕುಂದಗೋಳ ಪಟ್ಟಣದ ನಿವಾಸಿಯಾದ ಯಮನಪ್ಪ ಪಾಯಕ್ನವರಿಗೆ ಸೇರಿದ 7 ಎಕರೆ 6 ಗುಂಟೆ ಜಮೀನನ್ನು ದೇವರಾಜ್ ತನ್ನ ಪ್ರಭಾವ ಬಳಸಿ ಉಳುಮೆ ಮಾಡಿಕೊಂಡಿದ್ದನು. ಈ ಸಂಬಂಧ ಯಮನಪ್ಪ ಅವರು 2016ರಲ್ಲಿ ಜಮೀನು ತಮ್ಮದು ಎಂದು ನ್ಯಾಯಾಲಯ ಮೊರೆ ಹೋಗಿದ್ದರು.
ಅರ್ಜಿಯನ್ನು ವಿಚಾರಣೆ ನಡೆಸಿದ ಧಾರವಾಡ ಜಿಲ್ಲಾ ಸಿವಿಲ್ ಕೋರ್ಟ್ ಜಮೀನು ಯಮನಪ್ಪರಿಗೆ ಸೇರಬೇಕೆಂದು ತೀರ್ಪು ನೀಡಿತ್ತು. ತೀರ್ಪು ತನ್ನ ಪರ ಬರದಕ್ಕೆ ಕೋಪಗೊಂಡ ದೇವರಾಜ್ ಮತ್ತು ಮಕ್ಕಳಾದ ಅನಿಲ್, ಆನಂದ್, ಸುನೀಲ್ ಸೇರಿಕೊಂಡು ಹತ್ತಿ, ಮೆಣಸಿನಕಾಯಿ, ಟೊಮೋಟೋ ಬೆಳೆಗೆ ಕಳೆನಾಶಕ ಸಿಂಪಡಿಸಿ ನಾಶ ಮಾಡಿದ್ದರು. ಈ ತಂದೆ ಮಕ್ಕಳ ಕೃತ್ಯ ಇದೇ ಮೊದಲಲ್ಲ. ಕಳೆದ ವರ್ಷವೂ ಇದೇ ಜಮೀನಿನಲ್ಲಿ ಬೆಳೆದ ಹೆಸರು ಬೆಳೆಗೆ ಬೆಂಕಿ ಹಚ್ಚಿದ್ದರು. ನಾಲ್ಕು ದಿನದ ಹಿಂದೆ ದಾನಪ್ಪ ಮತ್ತು ಆತನ ಮಕ್ಕಳು ಯಮನಪ್ಪ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply